ನವದೆಹಲಿ: ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು 'ಹೆಚ್ಚುವರಿ ಅಫಿಡವಿಟ್' ಸಲ್ಲಿಸುವಂತೆ ಮಹಾರಾಷ್ಟ್ರ ರಾಜ್ಯಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ವಲಸಿಗರ ಸಮಸ್ಯೆ ಕುರಿತ ಸುಮೋಟೋ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ನಡೆಸುತ್ತಿದೆ. ಕಳೆದ ಬಾರಿಯ ವಿಚಾರಣೆ ವೇಳೆ ವಲಸೆ ಕಾರ್ಮಿಕರಿಗೆ ಉಚಿತ ಆಹಾರ, ಸಾರಿಗೆ, ಉದ್ಯೋಗ ವ್ಯವಸ್ಥೆ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಅಲ್ಲದೇ ಶೀಘ್ರದಲ್ಲೇ ಈ ಕುರಿತು ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರಸಲ್ಲಿಸಿರುದ ಅಫಿಡವಿಟ್ನಲ್ಲಿ ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದೆ. ಈ ಮಾಹಿತಿಯನ್ನು ಅಲ್ಲಗಳೆದಿರುವ ಕೋರ್ಟ್, ವಲಸಿಗರ ವಿಷಯದಲ್ಲಿ ರಾಜ್ಯದಲ್ಲಿ ಎಲ್ಲವೂ ಉತ್ತಮವಾಗಿದೆ, ಅವರಿಗೆ ಆಹಾರ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಅಭಿಪ್ರಾಯ ಪಟ್ಟಿದ್ದು, ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ತಿಳಿಸಿದೆ.
ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ಕೆಲಸ ಕಳೆದುಕೊಂಡು ಮಹಾರಾಷ್ಟ್ರದಿಂದ ತಮ್ಮ ರಾಜ್ಯಗಳಿಗೆ ಮರಳಲು ಹೊರಟಿದ್ದ ವಲಸಿಗರಿಗೆ ಮತ್ತೆ ಉದ್ಯೋಗಾವಕಾಶ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಅವರ ಕೌಶಲ್ಯಕ್ಕೆ ತಕ್ಕಂತೆ ಅವರಿಗೀಗ ಕೆಲಸಗಳು ಸಿಗುತ್ತಿಲ್ಲ. ಒಬ್ಬ ಕಾರ್ಪೆಂಟರ್ ಹೊಲದಲ್ಲಿ ಉಳುವೆ ಮಾಡಲು ಆಗಲ್ಲ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇನ್ನು ಅಫಿಡವಿಟ್ ಸಲ್ಲಿಕೆ ಮಾಡದ ರಾಜ್ಯಗಳಿಗೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿಕೆ ಮಾಡಿದೆ.