ತ್ರಿಪುರ: ಕೊರೊನಾ ವೈರಸ್ನಿಂದ ಮಾಡಲಾದ ಲಾಕ್ಡೌನ್ ಅದೆಷ್ಟೋ ವಲಸೆ ಕಾರ್ಮಿಕರ ಜೀವನಕ್ಕೆ ಸಂಚಕಾರ ತಂದೊಡ್ಡಿದೆ. ಆದರೆ, ಇಲ್ಲೊಂದು ದಂಪತಿಗೆ ಮಗು ಜನನವಾಗಿದ್ದು ಏನಂತ ಹೆರಸಿಟ್ಟಿದ್ದಾರೆ ಗೊತ್ತಾ...
ಸಂಜಯ್ ಬೌರಿ ಮತ್ತು ಅವರ ಪತ್ನಿ ಮಂಜು ಬೌರಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡಿ ಜೀವನ ನಡೆಸುವ ವಲಸೆ ಕಾರ್ಮಿಕರು. ಇವರು ಒಂದೇ ರಾಜ್ಯ ಅಲ್ಲದೆ, ವಿವಿಧ ರಾಜ್ಯಗಳಿಗೆ ಪ್ರಯಾಣಿಸಿ ತಮ್ಮ ವಸ್ತುಗಳನ್ನು ಮಾರಿ ದಿನ ದೂಡುತ್ತಾರೆ. ಅಲ್ಲದೆ, ವರ್ಷದಲ್ಲಿ ಆರು ತಿಂಗಳುಗಳ ಕಾಲ ತ್ರಿಪುರದಲ್ಲೇ ಪ್ಲಾಸ್ಟಿಕ್ ವಸ್ತುಗಳನ್ನು ಮಾರಿ ಹಣ ಸಂಪಾದನೆ ಮಾಡುತ್ತಾರೆ.
ಇನ್ನು ಈ ದಂಪತಿಗೆ ಮಗು ಹುಟ್ಟಿದ್ದು, ಅದಕ್ಕೆ ಲಾಕ್ಡೌನ್ ಎಂದು ಹೆಸರಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಜಯ್ ಬೌರಿ, ನನ್ನ ಹೆಂಡತಿ ಆರು ದಿನಗಳ ಹಿಂದೆ ಇಲ್ಲಿನ ಸರ್ಕಾರಿ ಇಂದಿರಾ ಗಾಂಧಿ ಸ್ಮಾರಕ (ಐಜಿಎಂ) ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ಈ ಕಠಿಣ ಸಮಯವನ್ನು ನಾವು ನೆನಪಿಸಿಕೊಂಡು ನಮ್ಮ ಮಗುವಿಗೆ ಲಾಕ್ಡೌನ್ ಎಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ. ಬಿಹಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ತ್ರಿಪುರಕ್ಕೆ ಬಂದಿದ್ದ ಬೌರಿ ದಂಪತಿಯಂತಹ ಅನೇಕ ವ್ಯಾಪಾರಿಗಳು ಲಾಕ್ಡೌನ್ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ.
ನಾನು ಮತ್ತು ನನ್ನ ಹೆಂಡತಿ ಇತರ 61 ವ್ಯಾಪಾರಿಗಳೊಂದಿಗೆ ನಮ್ಮ ಊರಿಗೆ ಮರಳಲು ಪ್ರಯತ್ನಿಸಿದೆವು, ಆದರೆ, ಅದು ಸಾಧ್ಯವಾಗಲಿಲ್ಲ. ರೈಲ್ವೆ ಪೊಲೀಸ್ ಸಿಬ್ಬಂದಿ ನಮ್ಮನ್ನು ಕರೆತಂದು ಶಾಲೆಗಳಲ್ಲಿ ಇರಿಸಿ ಆಶ್ರಯ ಕಲ್ಪಿಸಿದ್ದಾರೆ ಎಂದು ಬೌರಿ ಹೇಳಿದ್ದಾರೆ. ಅಧಿಕಾರಿಗಳು ನಮಗೆ ಆಹಾರ, ಔಷಧಿಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ನನ್ನ ಹೆಂಡತಿಗೆ ವೈದ್ಯಕೀಯ ನೆರವು ನೀಡಿದರು ಎಂದು ಬೆರಿ ಅಧಿಕಾರಿಗಳ ಕೆಲಸವನ್ನು ಸ್ಮರಿಸಿದರು.