ಮುಂಬೈ : ಕೊರೊನಾ ಸಮರದಲ್ಲಿ ಅತಿ ಮುಖ್ಯ ಪಾತ್ರವಹಿಸಿರುವ ಪೊಲೀಸರು ಸಹ ಕೋವಿಡ್ ಕೆನ್ನಾಲಿಗೆಗೆ ಬಲಿಯಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ರುದ್ರನರ್ತನದ ಮಧ್ಯೆ 1,140 ಪೊಲೀಸರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇದರಲ್ಲಿ 120 ಪೊಲೀಸ್ ಅಧಿಕಾರಿಗಳು ಮತ್ತು 1,120 ಪೊಲೀಸ್ ಸಿಬ್ಬಂದಿ ಇದ್ದಾರೆ.
ಈ ವರೆಗೆ 32 ಪೊಲೀಸ್ ಅಧಿಕಾರಿಗಳು ಮತ್ತು 236 ಪೊಲೀಸ್ ಸಿಬ್ಬಂದಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 268 ಪೊಲೀಸ್ ಸಿಬ್ಬಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 88 ಪೊಲೀಸ್ ಅಧಿಕಾರಿಗಳು ಮತ್ತು 862 ಪೊಲೀಸ್ ಸಿಬ್ಬಂದಿ ಸೇರಿದಂತೆ 872 ಪೊಲೀಸರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಾದೃಷ್ಟವಶಾತ್, ಮುಂಬೈ ಪೊಲೀಸ್ ಇಲಾಖೆಯಲ್ಲಿ 7, ಪುಣೆ, ನಾಸಿಕ್ ಮತ್ತು ಸೋಲಾಪುರದಲ್ಲಿ ತಲಾ 1 ಸೇರಿದಂತೆ 10 ಪೊಲೀಸರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ 231 ಘಟನೆಗಳು ವರದಿಯಾಗಿದ್ದು, ಈ ವರೆಗೆ 812 ಜನರನ್ನು ಬಂಧಿಸಲಾಗಿದೆ. ಕೋವಿಡ್-19 ಗೆ ಸಂಬಂಧಿಸಿದಂತೆ ಪೊಲೀಸರ ‘100’ ನಿಯಂತ್ರಣ ಕೊಠಡಿಗೆ 92,599 ಕರೆಗಳನ್ನು ಮಾಡಲಾಗಿದೆ ಮತ್ತು 1,305 ಅಕ್ರಮ ಸಂಚಾರ ಪ್ರಕರಣಗಳಲ್ಲಿ 58,568 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ 37 ಸ್ಥಳಗಳಲ್ಲಿ ಹಲ್ಲೆ ನಡೆಸಿದ್ದು, 86 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.