ಶ್ರೀನಗರ: ಕಳೆದ ವರ್ಷ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ನೆನಪಿಗೆ ನಿರ್ಮಿಸಲಾಗಿರುವ ಸ್ಮಾರಕ ಇಂದು ಉದ್ಘಾಟನೆಯಾಗಲಿದೆ.
ಸಿಆರ್‌ಪಿಎಫ್‌ನ ಹೆಚ್ಚುವರಿ ಮಹಾನಿರ್ದೇಶಕ ಜುಲ್ಫಿಕರ್ ಹಸನ್ ಈ ಬಗ್ಗೆ ಮಾಹಿತಿ ನೀಡಿದ್ದು, ಲೆಥ್‌ಪೋರಾ ಶಿಬಿರದಲ್ಲಿ ಸ್ಮಾರಕ ಉದ್ಘಾಟಿಸಲಾಗುವುದು ಎಂದು ಹೇಳಿದ್ದಾರೆ.
ಸ್ಮಾರಕ ನಿರ್ಮಾಣವಾಗಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯು ಒಂದು ದುರಂತ ಘಟನೆಯಾಗಿದ್ದು, ಇದರಿಂದ ನಾವು ಯಾವಾಗಲೂ ಜಾಗರೂಕತೆಯಿಂದ ಇರಬೇಕೆಂಬ ಪಾಠ ಕಲಿತಿದ್ದೇವೆ. ಈ ಸ್ಮಾರಕವು ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಯೋಧರಿಗೆ ಗೌರವ ಸಲ್ಲಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದರು.
40 ಸಿಬ್ಬಂದಿಗಳ ಹೆಸರು ಹಾಗೂ ಭಾವಚಿತ್ರದ ಜೊತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ ಧ್ಯೇಯವಾಕ್ಯವಾದ 'ಸೇವೆ ಮತ್ತು ನಿಷ್ಠೆ' ನಾಮಾಂಕಿತ ಕೂಡ ಸ್ಮಾರಕದಲ್ಲಿ ಇರಲಿದೆ.