ಕನ್ನೂರು: ತಲಸ್ಸೆರಿ ಮೂಲದ ಸುಚೇತ ಸತೀಶ್ ಸುಮಾರು 100ಕ್ಕೂ ಅಧಿಕ ಭಾಷೆಗಳಲ್ಲಿ ಹಾಡುವುದರ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಕೇವಲ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈಕೆ 12 ಗಂಟೆಗಳಲ್ಲಿ 112 ಭಾಷೆಗಳ ಹಾಡುಗಳನ್ನ ಹಾಡಿ 2 ವರ್ಲ್ಡ್ ರೆಕಾರ್ಡ್ ತನ್ನದಾಗಿಸಿಕೊಂಡಿದ್ದಾಳೆ. ಮೊದಲು ಜಾಪನೀಸ್ ಭಾಷೆಯಲ್ಲಿ ಹಾಡಿದ್ದು, ಸದ್ಯ 116 ಭಾಷೆಯಲ್ಲಿ ಹಾಡುವ ಕಲೆ ಬೆಳೆಸಿಕೊಂಡಿದ್ದಾಳೆ.
ಡಾ.ಸತೀಶ್ ಮತ್ತು ಸುನಿತಾ ಆಯಿಲ್ಯಾಂ ದಂಪತಿಯ ಪುತ್ರಿ ಸುಚೇತಾ, ವಿವಿಧ ಭಾಷೆಗಳ ಮೇಲಿನ ಕೂತೂಹಲದಿಂದ ಹಾಡಲು ಆರಂಭಿಸಿದಳು. ನಂತರ ಪೋಷಕರು, ಸ್ನೇಹಿತರು ಮತ್ತು ಗುರುಗಳ ಪ್ರೋತ್ಸಾಹ, ಬೆಂಬಲದಿಂದ ಈ ಅಭ್ಯಾಸವನ್ನು ತನ್ನ ಕಲೆಯಾಗಿಸಿಕೊಂಡಿದ್ದಾಳೆ.
ದುಬೈನ ದಿ ಇಂಡಿಯನ್ ಕನ್ಸಲ್ಟ್ ಹಾಲ್ನಲ್ಲಿ ನಡೆದ ಮ್ಯೂಸಿಕ್ ಬಿಯಾಂಡ್ ಬೌಂಡರೀಸ್ ಕಾರ್ಯಕ್ರಮದಲ್ಲಿ 102 ಭಾಷೆಯಲ್ಲಿ ಹಾಡಿ 2 ವರ್ಲ್ಡ್ ರೆಕಾರ್ಡ್‌ನ ತನ್ನ ಮುಡಿಗೇರಿಸಿಕೊಂಡಳು. 26 ಭಾರತೀಯ ಭಾಷೆ, 76 ವಿದೇಶಿ ಭಾಷೆಗಳಲ್ಲಿ ಹಾಡುವ ಈಕೆ ತನ್ನ ಹಾಡಿನ ಆಲ್ಬಂನ 5ಲಕ್ಷ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಅಲ್ಲದೇ ಕಳೆದ ಬಾರಿ ಕೇರಳದಲ್ಲಾದ ಪ್ರವಾಹ ಸಮಸ್ಯೆಗೆ ಸಹಾಯ ಧವವನ್ನೂ ಸಹ ನೀಡಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಕಾರ್ಯಕ್ರಮವೊಂದರಲ್ಲಿ ಹಾಡುವ ಅವಕಾಶ ದೊರೆತಿದ್ದು, ತನ್ನ ಅತಿ ದೊಡ್ಡ ಸಾಧನೆ ಎನ್ನುತ್ತಾಳೆ ಸುಚೇತ. ತನ್ನ ಮೂರನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ್ದು, ಈಗಲೂ ಇತರೆ ಭಾಷೆಗಳಲ್ಲಿ ಹಾಡುವುದರೆಡೆಗೆ ಗಮನ ಹರಿಸಿದ್ದಾಳೆ.