ನವದೆಹಲಿ: ಚೀನಾ ಮತ್ತು ಭಾರತದ ನಡುವೆ ಲಡಾಖ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆಯುತ್ತಿದ್ದಂತೆ, ಉಭಯ ದೇಶಗಳ ಮುಖಂಡರ ಮಾತುಕತೆಯೂ ಕೂಡಾ ನಡೆಯುತ್ತಿದೆ.
ಇಂದು ಬೆಳಗ್ಗೆ 11 ಗಂಟೆಗೆ ಭಾರತ ಹಾಗೂ ಚೀನಾದ ನಡುವೆ ಮಾತುಕತೆ ನಡೆಯಲಿದ್ದು, ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ನಡೆಯಲಿದೆ. ಈ ಮಾತುಕತೆಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ವಶದಲ್ಲಿರುವ ಮೋಲ್ಡೋದಲ್ಲಿ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಚೀನಾ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ಈ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಎಲ್ಎಸಿ ಗಡಿಯನ್ನು ನಿಖರವಾಗಿ ನಿರ್ಧರಿಸುವ ಸಲುವಾಗಿ ಈ ಸಭೆ ಅನಿವಾರ್ಯವಾಗಿದೆ ಎಂದು ಈಟಿವಿ ಭಾರತ್ಗೆ ಉನ್ನತ ಮೂಲಗಳು ಸ್ಪಷ್ಟನೆ ನೀಡಿವೆ.
ಈ ಸಭೆಯಲ್ಲಿ ಲೇಹ್ ಮೂಲದ 14 ಕಾರ್ಪ್ಸ್ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಅವರು ಭಾರತದ ಪರವಾಗಿ ಭಾಗವಹಿಸಲಿದ್ದು, ಚೀನಾದ ಪರವಾಗಿ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿಯ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ಪ್ರಾತಿನಿಧ್ಯ ವಹಿಸಲಿದ್ದಾರೆ.
ಇದು ಚೀನಾ ಹಾಗೂ ಭಾರತದ ನಡುವಿನ ಕಮಾಂಡರ್ ಹಂತದ 6ನೇ ಸಭೆಯಾಗಿದ್ದು, ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2ರಂದು ಸಭೆಗಳು ನಡೆದಿದ್ದವು.