ಮಥುರಾ: ಇಲ್ಲಿನ ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಹೊಂದಿಕೊಂಡಂತೆ ಇರುವ 17ನೇ ಶತಮಾನದ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿಯನ್ನು ಮಥುರಾ ನ್ಯಾಯಾಲಯ ಇಂದು ಕೈಗೆತ್ತಿಕೊಳ್ಳಲಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಎರಡು ಅರ್ಜಿಗಳಲ್ಲಿ, ಅಖಿಲ ಭಾರತ ತೀರ್ಥ ಪುರೋಹಿತ್ ಮಹಾಸಭಾ ಮತ್ತು ಮಾಥುರ್ ಚತುರ್ವೇದಿ ಪರಿಷತ್, ಕಟೇಶ್ ಕೇಶವ್ ದೇವ್ ದೇವಸ್ಥಾನದೊಳಗೆ ನಿರ್ಮಿಸಲಾದ ಈದ್ಗಾ ಮಸೀದಿಯನ್ನು ತೆರವುಗೊಳಿಸುವ ಅರ್ಜಿಯನ್ನು ಖಂಡಿಸಿದರು. ಈ ವಿಚಾರ ನಗರದಲ್ಲಿ ಕೋಮು ಅಶಾಂತಿಯನ್ನು ಉಂಟುಮಾಡಬಹುದು ಎಂದು ವಾದಿಸಿದ್ದರು. ಹೀಗಾಗಿ ನ್ಯಾಯಾಲಯವು ಟ್ರಸ್ಟ್ ಮಸೀದಿ ಈದ್ಗಾ, ಯುಪಿ ಸುನ್ನಿ ಕೇಂದ್ರ ವಕ್ಫ್ ಮಂಡಳಿ, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥೆಗೆ ನೋಟಿಸ್ ನೀಡಿ, ವಿಚಾರಣೆಯನ್ನು ನವೆಂಬರ್ 18 ಕ್ಕೆ ನಿಗದಿಪಡಿಸಿತ್ತು. ಅದರಂತೆ ಇಂದು ವಿಚಾರಣೆ ನಡೆಯಲಿದೆ.
ಅರ್ಜಿಯಲ್ಲಿ ಶ್ರೀ ಕೃಷ್ಣ ಜನಂಸ್ಥಾನ್ ಸೇವಾ ಸಂಸ್ಥೆಯು ಶ್ರೀ ಕೃಷ್ಣ ದೇವಾಲಯದ ಈ ಆಸ್ತಿ ಕಬಳಿಸಲು ಶಾಹಿ ಈದ್ಗಾ ಟ್ರಸ್ಟ್ನೊಂದಿಗೆ ಅಕ್ರಮ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಆದರೆ ತಮ್ಮನ್ನು ಭಗವಾನ್ ಕೃಷ್ಣನ ಭಕ್ತರೆಂದು ಗುರುತಿಸಿಕೊಂಡ ಅರ್ಜಿದಾರರಿಗೆ "ಮೊಕದ್ದಮೆ ಹೂಡುವ ಹಕ್ಕು" ಇಲ್ಲ ಎಂಬ ಕಾರಣಕ್ಕೆ ಸಿವಿಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೆಪ್ಟೆಂಬರ್ 30 ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಈ ಕುರಿತು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ ವಕೀಲ ಮುಖೇಶ್ ಖಂಡೇಲ್ವಾಲ್, "ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿರುವ ನೋಟಿಸ್‌ಗಳನ್ನು ನಾವು ಸ್ವೀಕರಿಸಿದ್ದೇವೆ. ನವೆಂಬರ್ 18 ರಂದು ನಾವು ನಮ್ಮ ದಾಖಲೆಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ'' ಎಂದು ತಿಳಿಸಿದ್ರು.
ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಈದ್ಗಾ ಟ್ರಸ್ಟ್‌ನ ವಕೀಲರಾದ ಶೈಲೇಂದ್ರ ದುಬೆ ಮತ್ತು ತನ್ವೀರ್ ಅಹ್ಮದ್ ಮಾತನಾಡಿ ನಗರದಲ್ಲಿ ಶಾಂತಿಯುತ ವಾತಾವರಣವನ್ನು ಕೆಡಿಸಲು ಯಾರೂ ಬಯಸುವುದಿಲ್ಲ ಮತ್ತು ವಿಚಾರಣೆಯ ದಿನವಾದ ಇಂದು ಎಲ್ಲವೂ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದ್ರು.
ಈ ಹಿಂದೆ ಕೆಳ ಹಂತದ ನ್ಯಾಯಾಲಯದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವ ಸ್ಥಳದ ಮೇಲೆ ಮಾಲೀಕತ್ವ ಪಡೆಯಲು ಮತ್ತು ಮಸೀದಿಯನ್ನು ತೆರವುಗೊಳಿಸಲು ಕೋರಿ ಕೆಲ ದಿನಗಳ ಹಿಂದೆ ಮೊಕದ್ದಮೆ ಹೂಡಿದ್ದರು. ಆದರೆ ಮಥುರಾ ಸಿವಿಲ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.