ಹೈದರಾಬಾದ್: ತೆಲಂಗಾಣದ ದುಂಡಿಗಲ್‌ನ ವಾಯುಪಡೆ ಅಕಾಡೆಮಿ ಬಳಿಯ ರಾಸಾಯನಿಕ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಘಟಕದ ಗೋಡೌನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ದ್ರಾವಕಗಳು ತುಂಬಿರುವ ಡ್ರಮ್ಗಳು ಸ್ಫೋಟಗೊಂಡಿವೆ. ಈ ಹಿನ್ನೆಲೆಯಲ್ಲಿ ಬೆಂಕಿ ವೇಗವಾಗಿ ಹರಡಿಕೊಂಡಿರಬಹುದು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಕಿ ನಂದಿಸಲು ದುಂಡಿಗಲ್ ಏರ್ಫೋರ್ಸ್ ಅಕಾಡೆಮಿಯ 2 ದಳ ಹಾಗೂ ಅಗ್ನಿಶಾಮಕ ದಳದ 8 ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಆಗಸ್ಟ್ 20ರಂದು ನಾಗರ ಕರ್ನೂಲ್ ಜಿಲ್ಲೆಯಲ್ಲಿರುವ ಜಲ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಜನ ಸಾವನ್ನಪ್ಪಿದ್ದರು. ಈ ಘಟನೆ ಸಂಭವಿಸಿ 2 ದಿನಗಳಷ್ಟೇ ಕಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.