ತಿರುವನಂತಪುರಂ (ಕೇರಳ): ಕೇರಳದ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಮೂರನೇ ಸೆಮಿಸ್ಟರ್ ಪರೀಕ್ಷೆಯ ವೇಳೆ ಸಾಮೂಹಿಕ ನಕಲು ಮಾಡಿದ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಿದ ವಿಶ್ವವಿದ್ಯಾಲಯದ ಸಿಂಡಿಕೇಟ್ ಪರೀಕ್ಷಾ ಉಪ ಸಮಿತಿಯು ವಿದ್ಯಾರ್ಥಿಗಳು ನಕಲು ಮಾಡಲು ವಾಟ್ಸಾಪ್ ಬಳಸಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ.
ವಿದ್ಯಾರ್ಥಿಗಳು ಒಂದು ಮೊಬೈಲ್ ಫೋನನ್ನು ಪರೀಕ್ಷಾ ಹಾಲ್ನ ಹೊರಗೆ ಇಟ್ಟುಕೊಂಡು ಮತ್ತೊಂದು ಫೋನನ್ನು ಇನ್ವಿಜಿಲೇಟರ್ಗಳ ಕಣ್ತಪ್ಪಿಸಿ ಪರೀಕ್ಷಾ ಹಾಲ್ನ ಒಳಗೆ ತಂದಿರುವುದು ತಿಳಿದುಬಂದಿದೆ. ಪ್ರತಿ ವಿಷಯಕ್ಕೆ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿ, 75 ಅಂಕಗಳ ಮೌಲ್ಯದ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಗುಂಪಿನ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ತಿರುವನಂತಪುರಂನ ಕೇರಳ ತಾಂತ್ರಿಕ ವಿಶ್ವವಿದ್ಯಾಲಯದ (ಕೆಟಿಯು) ವ್ಯಾಪ್ತಿಯ ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳಿಂದ 28ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪರೀಕ್ಷೆಯ ವೇಳೆ ದುಷ್ಕೃತ್ಯ ವರದಿಯಾಗಿದೆ.
28 ಫೋನ್‌ಗಳಲ್ಲಿ ಒಂದು ಕಾಲೇಜಿನಿಂದ 16 ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮತ್ತೊಂದು ಕಾಲೇಜಿನಿಂದ 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, ಇತರ ಎರಡು ಕಾಲೇಜುಗಳಿಂದ ಎರಡು ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪರೀಕ್ಷೆಯ ಸಮಯದಲ್ಲಿ ನಡೆದ ದುಷ್ಕೃತ್ಯವನ್ನು ಕಂಡುಹಿಡಿದ ವಿಶ್ವವಿದ್ಯಾಲಯವು ಅಧಿಕೃತವಾಗಿ ಪರೀಕ್ಷೆಯನ್ನು ರದ್ದುಗೊಳಿಸಿತ್ತು.