ಭದೋಹಿ (ಉತ್ತರ ಪ್ರದೇಶ): ಜಿಲ್ಲೆಯ ಜ್ಞಾನಪುರದಲ್ಲಿ ಕಾಮುಕರು ವಿವಾಹಿತ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಮಾರುಕಟ್ಟೆಗೆ ತೆರಳಿದ್ದಾಗ ಅಲ್ಲಿ ನಾಲ್ವರು ಆಕೆಯನ್ನು ಅಪಹರಿಸಿ ಜಮುನಿ ಪೋಖ್ರಾ ಪ್ರದೇಶದ ಬಳಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರ ಎಸಗಿದ ಕುರಿತು ಯಾರಿಗಾದರೂ ಹೇಳಿದರೆ ಮಕ್ಕಳನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಸಂತ್ರಸ್ತೆ ತನ್ನ ಪತಿಯೊಂದಿಗೆ ಭದೋಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಯ್‌ಪುರ ಗ್ರಾಮದ ನಿವಾಸಿಗಳಾದ ಧನಂಜಯ್ ಶುಕ್ಲಾ, ಟಿಂಕು ಶುಕ್ಲಾ, ವಿಕಾಸ್ ಕುಮಾರ್ ಮತ್ತು ಸೋನು ಉಪಾಧ್ಯಾಯ ಎಂಬ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ಇತ್ತೀಚೆಗಷ್ಟೇ ಯುವತಿವೋರ್ವಳನ್ನು ಅಪಹರಿಸಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಚಿಕಿತ್ಸೆ ಫಲಿಸದೇ ಸಂತ್ರಸ್ತೆ ದೆಹಲಿಯ ಸಫ್ತರ್ ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿದೆ.