ತಿರುವನಂತಪುರ( ಕೇರಳ): ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇಂದಿನಿಂದ ಪೂಜೆ ಆರಂಭವಾಗಿದ್ದು, ಅರ್ಚಕರಾದ ಸುಧೀರ್ ನಂಬೂತಿರಿ ಮತ್ತು ಜಯರಾಜ್ ಪೊಟ್ಟಿ (ಪುರಪೆಡ್ಡ ಶಾಂತಿಮಾರ್) ಅವರು ಬೆಳಗ್ಗೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗಿದೆ. ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ತಮ್ಮ ಸ್ಲಾಟ್ ಅನ್ನು ನೋಂದಾಯಿಸಿಕೊಂಡ ಮತ್ತು ಕಾಯ್ದಿರಿಸಿದ ಅಯ್ಯಪ್ಪ ಯಾತ್ರಿಕರು ಅಯ್ಯಪ್ಪ ದರ್ಶನಕ್ಕಾಗಿ ಬೆಟ್ಟ ಹತ್ತುವಿಕೆ ಪ್ರಾರಂಭಿಸಿದ್ದಾರೆ.
ಶಬರಿಮಲೆಗೆ ಆಗಮಿಸುವ ಭಕ್ತರು ವರ್ಚುವಲ್ ಕ್ಯೂ ಪ್ರಕಾರ ದರ್ಶನ ಪಡೆಯಬೇಕು. ದರ್ಶನಕ್ಕಾಗಿ ಆಗಮಿಸುವ 24 ಗಂಟೆಗಳ ಮೊದಲು ಪಡೆದ ಕೊರೊನಾ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗಿದೆ. ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ನಿಲಯಕ್ಕಲ್‌ನಲ್ಲಿ ಆ್ಯಂಟಿಜನ್ ಟೆಸ್ಟ್ ನಡೆಸಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಅವರನ್ನು ರಾಣಿಯ ಸಿಎಫ್‌ಎಲ್‌ಟಿಸಿಗೆ ಕೊಂಡೊಯ್ಯಲಾಗುವುದು. ಸಣ್ಣ ವಾಹನಗಳನ್ನು ಪಂಪಾಕ್ಕೆ ಬಿಡುವುದಾದರೂ ತ್ರಿವೇಣಿಯಲ್ಲಿ ಇಳಿಸಿ ನಿಲಯಕ್ಕಲ್‌ನಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು.
ಈಗಾಗಲೇ ಶಬರಿಮಲೆ ದರ್ಶನಕ್ಕಾಗಿ ಆರೋಗ್ಯ ಇಲಾಖೆ 9 ಮಾರ್ಗ ನಿರ್ದೇಶಗಳನ್ನು ಹೊರಡಿಸಿದೆ. ಕೊರೊನಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸಬೇಕು, ಕೆಮ್ಮು, ಕೊರೊನಾ ಬಾಧಿಸಿದವರು, ಜ್ವರ ಇದ್ದವರಿಗೆ ಪ್ರವೇಶವಿಲ್ಲ. ಪಂಪಾ, ನಿಲಯಕ್ಕಲ್ ಮುಂತಾದ ಸ್ಥಳಗಳಲ್ಲಿ ಭಕ್ತರ ವಾಸ್ತವ್ಯಕ್ಕೆ ಅವಕಾಶವಿಲ್ಲ ಮುಂತಾದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಬುಕ್ ಮಾಡಿದ ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ಅನುಮತಿಸಲಾಗಿದೆ. ಯಾತ್ರಾರ್ಥಿಗಳಿಗೆ ಎಲ್ಲ ನೈರ್ಮಲ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಯಾತ್ರಿಕರಿಗೆ ಪಂಪಾ ನದಿಯಲ್ಲಿ ಸ್ನಾನ ಮಾಡಲು ಅನುಮತಿ ನೀಡಿಲ್ಲ.
ನಿತ್ಯ 1000 ಯಾತ್ರಾರ್ಥಿಗಳಿಗೆ ದರ್ಶನ ಮಾಡಲು ಅನುಮತಿಸಲಾಗುತ್ತದೆ. ಯಾತ್ರಾರ್ಥಿಗಳು ನಿಯಮಾವಳಿಗಳ ಪ್ರಕಾರ ದರ್ಶನವಾದ ಕೂಡಲೇ ಹಿಂತಿರುಗಿ ಆವರಣದಿಂದ ಹೊರ ಹೋಗಬೇಕು.