ರಾಂಚಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುಕಟ್ಟೆಯೊಂದರಲ್ಲಿ ವ್ಯಕ್ತಿಯೊಬ್ಬ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವ ಮೂಲಕ ಸಂಚಲನ ಮೂಡಿಸಿದ್ದಾನೆ.
ಹೌದು, ಪೊಲೀಸ್ ಠಾಣೆಯ ಹತ್ತಿರದ ಮಾರುಕಟ್ಟೆಯ ಬಳಿಯ ವ್ಯಕ್ತಿಯೊಬ್ಬ ಕಟ್ಟಡ ಮೇಲೆ ಹತ್ತಿದ್ದಾನೆ. ಬಳಿಕ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ಸ್ಥಳಕ್ಕೆ ದೌಡಾಯಿಸಿ, ಕಟ್ಟಡದ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಜಿಗಿಯದಂತೆ ಮನವಿ ಮಾಡಿದ್ದವು. ಆದರೆ ಅವನು ಪದೇ ಪದೆ ಛಾವಣಿ ಮೇಲಿಂದ ಜಿಗಿಯುವುದಾಗಿ ಬೆದರಿಕೆ ಹಾಕುತ್ತಿದ್ದನು. ಇದರಿಂದಾಗಿ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಆ ವ್ಯಕ್ತಿ ಕೆಳಗೆ ಜಿಗಿದ್ರೆ ಪೆಟ್ಟಾಗದಂತೆ ರಕ್ಷಾ ಕವಚ ಹಿಡಿದಿದ್ದರು. ಕೊನೆಗೆ ಆತ ಅಗ್ನಿಶಾಮಕ ದಳ ನಿರ್ಮಿಸಿದ ರಕ್ಷಾ ಕವಚದಲ್ಲಿ ಆ ವ್ಯಕ್ತಿ ಜಿಗಿದ್ದನು. ಈ ಮೂಲಕ ಆ ವ್ಯಕ್ತಿಗೆ ಯಾವುದೇ ಗಾಯಗಳು ಆಗದಂತೆ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳ ನೋಡಿಕೊಂಡಿತ್ತು. ಬಳಿಕ ಈತನನ್ನು ವಶಕ್ಕೆ ಪಡೆದ ಪೊಲೀಸರು ಮಾನಸಿಕ ಅಸ್ವಸ್ಥ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಈ ವ್ಯಕ್ತಿ ರಾಂಚಿಯ ಅಪ್ಪರ್ ಬಜಾರ್ ಪ್ರದೇಶದ ನಿವಾಸಿಯಾಗಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂದು ತಿಳಿದು ಬಂದಿದೆ. ರಾಂಚಿಯಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.