ಪುಣೆ : ಹಣದ ವಿಚಾರದಲ್ಲಿ ಕೆಲಸ ಮಾಡುವ ಕಂಪನಿಯ ಮಾಲೀಕ ಮತ್ತು ಇತರ ಮೂವರು ಸೇರಿಕೊಂಡು ವ್ಯಕ್ತಿಯೊಬ್ಬನನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿರುವ ಘಟನೆ ಮಹಾರಾಷ್ಟ್ರದ ಕೊಥ್ರೂಡ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 13 ಮತ್ತು ಜೂನ್ 14 ರಂದು ದೂರುದಾರ ವ್ಯಕ್ತಿ ಕೆಲಸ ಮಾಡುತ್ತಿದ್ದ ಸಂಸ್ಥೆಯ ಕಚೇರಿಯಲ್ಲಿ ಆತನಿಗೆ ಹಿಂಸೆ ನೀಡಲಾಗಿದೆ. ಜುಲೈ 2 ರಂದು ಪೌಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರುದಾರ ವ್ಯಕ್ತಿ ಕಲಾವಿದರ ವರ್ಣಚಿತ್ರಗಳ ಪ್ರದರ್ಶನಗಳನ್ನು ಆಯೋಜಿಸುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮಾರ್ಚ್ನಲ್ಲಿ ಅವರು ಕೆಲವು ಅಧಿಕೃತ ಕೆಲಸಗಳಿಗಾಗಿ ದೆಹಲಿಗೆ ತೆರಳಿದ್ದು. ಬಳಿಕ ಕೊರೊನಾ ಹಿನ್ನೆಲೆ ಪುಣೆಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಹೀಗಾಗಿ, ದೆಹಲಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಕಂಪನಿ ನೀಡಿದ್ದ ಹಣವನ್ನು ಅವರು ಬಳಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೇ 7 ರಂದು ದೆಹಲಿಯಿಂದ ಪುಣೆಗೆ ಹಿಂದಿರುಗಿದ ಅವರು 17 ದಿನಗಳ ಕಾಲ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದ್ದರು. ಈ ವೇಳೆ ಕ್ವಾರಂಟೈನ್ ಇದ್ದ ಹೋಟೆಲ್ಗೆ ಪಾವತಿಸಲು ಹಣವಿಲ್ಲದೇ, ತನ್ನ ಮೊಬೈಲ್ ಮತ್ತು ಡೆಬಿಟ್ ಕಾರ್ಡ್ನ್ನು ಅಡ ಇಟ್ಟಿದ್ದರು. ಆದರೆ, ಜೂನ್ 13 ರಂದು ಕಂಪನಿಯ ಮಾಲೀಕ ಮತ್ತು ಆತನ ಸಹಾಯಕರು ದೂರುದಾರ ವ್ಯಕ್ತಿಗೆ ದೆಹಲಿಯಲ್ಲಿ ಇದ್ದಾಗ ಖರ್ಚು ಮಾಡಿದ ಹಣವನ್ನು ನೀಡುವಂತೆ ಒತ್ತಡ ಹೇರಿದ್ದರು. ಬಳಿಕ ಅವರನ್ನು ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಕಚೇರಿಗೆ ಕರೆದುಕೊಡು ಹೋಗಿ, ಅಲ್ಲಿ ಮಾಲೀಕ ಮತ್ತು ಇತರರು ಸರಿಯಾಗಿ ಥಳಿಸಿ, ಖಾಸಗಿ ಭಾಗಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಹಣ ನೀಡುವಂತೆ ಚಿತ್ರ ಹಿಂಸೆ ನೀಡಿ, ಬಳಿಕ ಬಿಟ್ಟು ಕಳಿಸಿದ್ದಾರೆ ಎಂದು ದೂರಿನಲ್ಲಿ ಉ್ಲಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ದೂರುದಾರರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.