ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಪೌರತ್ವ ವಿರೋಧಿ ಹಿಂಸಾಚಾರದ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ, ಗುಂಡು ಹಾರಿಸಿ ಬೆದರಿಸಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ದೆಹಲಿಗೆ ಕರೆತಂದಿದ್ದಾರೆ.
ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ತೀವ್ರ ಹಿಂಸಾಚಾರ ಉಂಟಾಗಿದ್ದು 48 ಜನ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದರು. ಈ ಘರ್ಷಣೆ ವೇಳೆ 33 ವರ್ಷದ ಮಹಮ್ಮದ್ ಶಾರುಖ್ ಎಂಬ ಯುವಕ ಪೊಲೀಸ್ಗೆ ಪಿಸ್ತೂಲ್ ತೋರಿಸಿ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಘಟನೆ ನಂತರ ಶಾರುಕ್ ದೆಹಲಿಯಿಂದ ಉತ್ತರ ಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಇಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಘರ್ಷಣೆ ವೇಳೆ ಸ್ಥಳದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದಾನೆ. ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಶಾರುಕ್ನ ತಂದೆ ಈ ಹಿಂದೆ ಡ್ರಗ್ಸ್ ಕಳ್ಳ ಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತಂದೆಯ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.