ಹೈದರಾಬಾದ್: ವಿಡಿಯೋ ಮಾಡುತ್ತಿದ್ದಾಗ ಆಕಸ್ಮಿಕ ಕಟ್ಟಡದ ಮೇಲಿಂದ ಬಿದ್ದ ಮನೆಯ ಮಾಲೀಕನ ಮಗನೊಬ್ಬನನ್ನು ಕೊಲೆ ಮಾಡಿ ಹಣದ ಬೇಡಿಕೆ ಇಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕೊಲೆಗೀಡಾದ ಬಾಲಕನನ್ನು ಯೂಸುಫ್ ಮತ್ತು ಘೌಸಿಯಾ ಅವರ ಕಿರಿಯ ಮಗ ಸೈಯದ್ ಎಂದು ತಿಳಿದು ಬಂದಿದೆ.
ಸುದರ್ಶನ್ ಶರ್ಮಾ ಕೊಲೆ ಮಾಡಿದ ಯುವಕ. ಮನೆಯ ಮಾಲೀಕರ ಭಯದಿಂದ ಹಾಗೂ ಪ್ರಕಣದಿಂದ ಪಾರಾಗಲು ಸುದರ್ಶನ್, ಕಟ್ಟಡದ ಮೇಲಿಂದ ಬಿದ್ದ ಐದು ವರ್ಷದ ಬಾಲಕ ಸೈಯದ್ನನ್ನು ಕೊಲೆ ಮಾಡಿ ಬಚಾವ್ ಆಗುವ ಹುನ್ನಾರು ಹಾಕಿಕೊಂಡಿದ್ದನು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಸೈಯದ್ ಜೊತೆ ಸುದರ್ಶನ್ ಶರ್ಮಾ ಮನೆಯ ಮೇಲೆ ವಿಡಿಯೋ ಮಾಡುತ್ತಿದ್ದನು. ಈ ವೇಳೆ, ಬಾಲಕ ಸೈಯದ್ ಕಾಲು ಜಾರಿ ಟೆರಸ್ ಮೇಲಿಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಬಾಲಕ ಸೈಯದ್ನ ಸ್ಥಿತಿ ನೋಡಿದ ಸುದರ್ಶನ್, ಇದು ತನ್ನ ಮೇಲೆಯೇ ಬರುತ್ತದೆ ಎಂದು ತಿಳಿದು ಆತನನ್ನು ಮುಗಿಸಿ ಪ್ರಕರಣದಿಂದ ಬಚಾವ್ ಆಗುವ ಪ್ರಯತ್ನ ಮಾಡಿದ್ದನು. ಅಲ್ಲದೇ ಇದಕ್ಕೊಂದು ಕಥೆ ಕಟ್ಟಿ ಮೃತ ಬಾಲಕನ ತಂದೆ - ತಾಯಿಗೆ ಬೆದರಿಕೆ ಹಾಕಿದ್ದನು.
ಸುದರ್ಶನ್ ಮೃತ ಬಾಲಕನ ತಂದೆ - ತಾಯಿಯ ಮನೆಯಲ್ಲಿ ಬಾಡಿಗೆ ಇದ್ದನು. ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿದ್ದಾಗ ಬಾಲಕ ಸೈಯದ್ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಬಿದ್ದಿದ್ದನ್ನು ನೋಡಿದ ಸುದರ್ಶನ್, ಮನೆಯ ಮಾಲೀಕರು ತನ್ನನ್ನು ಕೊಲ್ಲದೇ ಬಿಡಲಾರರು ಎಂಬ ಆತಂಕದಲ್ಲಿ ಬಾಲಕ ಸೈಯದ್ನನ್ನು ಕೊಲೆ ಮಾಡಿ ಇಲ್ಲಿನ ಔಟರ್ ರಿಂಗ್ ರೋಡ್ನಲ್ಲಿ ಬಿಸಾಕಿ ಬಂದಿದ್ದನು.
ಕೊಲೆ ಬಳಿಕ ಸುದರ್ಶನ್ ಶರ್ಮಾ ಮೃತ ಬಾಲಕನ ಪೋಷಕರಿಗೆ ದೂರವಾಣಿ ಕರೆ ಮಾಡಿ 15 ಲಕ್ಷ ರೂ. ಬೇಡಿಕೆ ಇಟ್ಟಿದ್ದನು. ಬಾಲಕನ ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಇಲ್ಲಿನ ಠಾಣಾ ಪೊಲೀಸರು, ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ತಾನು ಮಾಡಿದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.