ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯ ತೀವ್ರ ಆತಂಕ ಎದುರಾಗಿರುವ ಬೆನ್ನಲ್ಲೆ, ವದಂತಿಗಳಿಗೆ ಕಿವಿಗೊಡದೆ, ಸಮಾಧಾನದಿಂದ ಇರಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಸಲಹೆ ನೀಡಿದ್ದಾರೆ.
ಅಮರನಾಥ ಯಾತ್ರೆಗೆ ಉಗ್ರರ ಕರಿನೆರಳು ಬಿದ್ದಿರುವ ಆತಂಕದ ಹಿನ್ನೆಲೆ ರಾಜ್ಯದ ರಾಜಕಾರಣಿಗಳ ನಿಯೋಗ, ರಾಜ್ಯಪಾಲರನ್ನು ಭೇಟಿ ಮಾಡಿತು. ಈ ವೇಳೆ, ಅನಗತ್ಯ ಗೊಂದಲವನ್ನುಂಟು ಮಾಡಲಾಗ್ತಿದೆ ಎಂದು ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದ್ದಾರೆ.
ಭದ್ರತೆ ವಿಚಾರದಲ್ಲಿಯೂ ಬೇಡದ ವಿಚಾರಗಳು ತಳುಕುಹಾಕಿಕೊಳ್ತಿವೆ. ಇದರಿಂದ ಅತಿಯಾದ ಗೊಂದಲ ಉಂಟಾಗುತ್ತಿದೆ. ವದಂತಿಗಳಿಗೆ ಕಿವಿಗೊಡದೆ, ಎಲ್ಲರೂ ಸಮಾಧಾನದಿಂದ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿಯೂ ರಾಜ್ಯಪಾಲರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ, ಶಾ ಪೈಸಲ್, ಸಯ್ಯದ್ ಲೋನೆ ಹಾಗೂ ಇಮ್ರಾನ್ ಅನ್ಸಾರಿ ಅವರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತು.
ಹೆಚ್ಚುವರಿ ವಿಮಾನ ಸಿದ್ಧತೆಗೆ ಸೂಚನೆ
ಇನ್ನು ದಿಢೀರ್ ವಿದ್ಯಾಮಾನದಿಂದಾಗಿ ಡಿಜಿಸಿಎಯು ಹೆಚ್ಚುವರಿ ವಿಮಾನಗಳನ್ನು ಸಿದ್ಧಗೊಳಿಸಿಕೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ. ಒಂದು ವೇಳೆ ಸಂದಿಗ್ಧ ಪರಿಸ್ಥಿತಿ ಉಂಟಾದರೆ ಈ ಕ್ರಮ ಕೈಗೊಳ್ಳುವಂತೆ ಹೇಳಿದೆ.