ಮುಂಬೈ: ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿ, ಮುಂಬೈಗೆ ತೆರಳಿರುವ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಅಲ್ಲಿನ ಶಾಸಕ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹೇಂದ್ರ ಸಿಂಘಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಆನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ನನ್ನ ಮಿತ್ರ. ಅವರು ಮುಂಬೈಗೆ ಬಂದಿದ್ದರಿಂದ ಭೇಟಿಯಾಗಲು ಬಂದಿದ್ದೆ. ಇದು ನಮ್ಮ ಮನೆಯ ವಿಚಾರ, ಮಾಧ್ಯಮದೊಂದಿಗೆ ಹಂಚಿಕೊಳ್ಳಲು ಆಗಲ್ಲ ಎಂದು ಹೇಳಿದರು.
ಇಬ್ಬರು ಪಾಸಿಟಿವ್ ವಿಚಾರಗಳ ಕುರಿತು ಮಾತನಾಡಿದ್ದೇವೆ. ಕರ್ನಾಟಕದ ಹಿತದೃಷ್ಟಿಯಿಂದಲೇ ಈ ಚರ್ಚೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಇದೆಲ್ಲವೂ ಸರಿಹೋಗಲಿದೆ. ಮಾಧ್ಯಮದವರು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಿಮಗೆ ಒಳ್ಳೆಯ ಸುದ್ದಿಯನ್ನೇ ಕೊಡ್ತೀವಿ ಎಂದರು.
ಸದ್ಯ ರಮೇಶ್ ಅವರೊಬ್ಬರನ್ನು ಮಾತ್ರ ಭೇಟಿ ಮಾಡಿದ್ದೇನೆ. ಬೇರೆ ಶಾಸಕರನ್ನು ಸಂಪರ್ಕಿಸಿಲ್ಲ ಎಂದರು.