ಠಾಣೆ: ಚಲಿಸುತ್ತಿದ್ದ ಟ್ರೈನ್ನಿಂದ ಬಿದ್ದು 22 ವರ್ಷದ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದ್ದು, ವಿಪರೀತ ಜನಸಂದಣಿಯಿಂದ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿರುವ ಕಾರಣ ಈ ದುರ್ಘಟನೆ ನಡೆದಿದೆ.
ಎಂದಿನಂತೆ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಡೊಂಬಿವಾಲಿ ಮತ್ತು ಕೋಪರ್ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಉಪನಗರ ರೈಲು ಹತ್ತಿದ್ದು, ಅದರಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ತನ್ನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಡೊಂಬಿವಾಲಿ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಪವಾರ್, ರೈಲಿನಲ್ಲಿ ಹೆಚ್ಚಿನ ಜನದಟ್ಟಣೆ ಇದ್ದ ಕಾರಣ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮುಂಬೈ ಉಪನಗರದಲ್ಲಿ ಪ್ರತಿದಿನ ಇಂತಹ ಘಟನೆ ನಡೆಯುತ್ತಿದ್ದು, ಕನಿಷ್ಠ 8-10 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2010 ಜನವರಿಯಿಂದ ಈ ವರ್ಷದ ಸೆಪ್ಟೆಂಬರ್ವರೆಗೆ ಉಪನಗರ ರೈಲು ಅಪಘಾತದಲ್ಲೇ ಸುಮಾರು 27,000 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.