ಪುಣೆ: ಕೊರೊನಾ ವೈರಸ್ ತಡೆಗಟ್ಟಲು ವಿಧಿಸಲಾಗಿರುವ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮೂವರಿಗೆ 3 ದಿನಗಳ ಜೈಲು ಶಿಕ್ಷೆ ವಿಧಿಸಿ ಬಾರಾಮತಿ ನ್ಯಾಯಾಲಯ ಆದೇಶ ಹೊರಡಿಸಿದೆ. ಲಾಕ್ಡೌನ್ ಉಲ್ಲಂಘಿಸಿದ ಪ್ರಕರಣಗಳಲ್ಲಿ ಇದು ದೇಶದಲ್ಲೇ ಶಿಕ್ಷೆ ಘೋಷಣೆಯಾದ ಮೊದಲ ಪ್ರಕರಣವಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ.
ಪ್ರಕರಣ ವಿಚಾರಣೆ ನಡೆಸಿದ ಬಾರಾಮತಿ ನ್ಯಾಯಾಲಯದ ನ್ಯಾಯಮೂರ್ತಿ ಜೆ,ಜೆ. ಬಚುಲ್ಕರ್, ಆರೋಪಿಗಳಾದ ಅಫ್ಜಲ್ ಅತ್ತಾರ್ (39), ಚಂದ್ರಕುಮಾರ ಶಾ (38), ಅಕ್ಷಯ ಶಾ (32) ಅವರಿಗೆ 3 ದಿನಗಳ ಜೈಲು ಶಿಕ್ಷೆ ಹಾಗೂ ತಲಾ 500 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
"ಪುಣೆ ಜಿಲ್ಲೆಯ ಬಾರಾಮತಿ ವ್ಯಾಪ್ತಿಯಲ್ಲಿ ಲಾಕ್ಡೌನ್ ಉಲ್ಲಂಘಿಸಿ ತಿರುಗಾಡುತ್ತಿದ್ದ ಮೂವರ ವಿರುದ್ಧ ಐಪಿಸಿ ಸೆಕ್ಷನ್ 188ರಡಿ ಪ್ರಕರಣ ದಾಖಲಿಸಲಾಗಿತ್ತು. ಈಗ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಲಾಕ್ಡೌನ್ ಉಲ್ಲಂಘಿಸಿದ ಪ್ರಕರಣದಲ್ಲಿ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ" ಎಂದು ಬಾರಾಮತಿ ಡಿವೈಎಸ್ಪಿ ನಾರಾಯಣ ಶಿರಗಾಂವಕರ್ ಹೇಳಿದ್ದಾರೆ.
ಅಪರಾಧಿಗಳಿಗೆ ವಿಧಿಸಲಾದ ಶಿಕ್ಷೆಯ ಪ್ರಮಾಣ ಚಿಕ್ಕದಾದರೂ, ಇನ್ನು ಮುಂದೆ ಲಾಕ್ಡೌನ್ ಉಲ್ಲಂಘಿಸುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಸುಖಾಸುಮ್ಮನೆ ಬೈಕ್ ತೆಗೆದುಕೊಂಡು ಸುತ್ತಾಡುವವರು ಇನ್ನಾದರೂ ಎಚ್ಚರಿಕೆಯಿಂದಿರುವುದು ಕ್ಷೇಮ.