ಮುಂಬೈ: ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಹಲವು ನದಿಗಳು ತುಂಬಿ ಹರಿಯುತ್ತಿದೆ.
ಕೊಲ್ಲಾಪುರದಲ್ಲಿ ಪಂಚಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಎಲ್ಲ ನದಿಗಳಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪಂಚಗಂಗಾ ನದಿಯ ಮಟ್ಟ 42.5 ಅಡಿ. ಅಪಾಯಕಾರಿ ಮಟ್ಟವನ್ನು ತಲುಪಲು ಕೇವಲ 5 ಇಂಚುಗಳಷ್ಟೇ ಉಳಿದಿವೆ. ರಾಧಾನಗರಿ ಅಣೆಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಮುಂದುವರೆದಿದ್ದು, ರಾಧಾನಗರಿ ಅಣೆಕಟ್ಟಿನ ಸ್ವಯಂಚಾಲಿತ ಗೇಟ್‌ಗಳು ಯಾವುದೇ ಕ್ಷಣದಲ್ಲಿ ತೆರೆಯುವ ಸಾಧ್ಯತೆ ಇದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಈ ಭಾಗದ 23 ಹಳ್ಳಿಗಳಿಂದ ಸುಮಾರು 1,750 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇಲ್ಲಿಯವರೆಗೆ ಗದಿಂಗ್ಲಾಸ್, ಪನ್ಹಾಲಾ, ಕಾರ್ವೀರ್, ಗಗನ್‌ಬಾವ್ದಾ, ಅಜಾರಾ ಮತ್ತು ಕೊಲ್ಲಾಪುರದ 23 ಗ್ರಾಮಗಳ 1,750 ಕುಟುಂಬದ ಸುಮಾರು 4,413 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೌಲತ್ ದೇಸಾಯಿ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಈಗಾಗಲೇ ನಾಲ್ಕು ತಂಡಗಳನ್ನು ಕೊಲ್ಲಾಪುರ ಜಿಲ್ಲೆಯಲ್ಲಿ ನಿಯೋಜಿಸಿದೆ.
ಪುಣೆ ಮತ್ತು ಪಕ್ಕದ ಪ್ರದೇಶಗಳಲ್ಲಿ ಗುಡುಗು -ಮಿಂಚು ಸಹಿತ ಮಧ್ಯಮ ಮಳೆಯಾಗಲಿದೆ. ಘಾಟ್ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಇನ್ನೊಂದೆಡೆ ಸಾಂಗ್ಲಿ ಜಿಲ್ಲಾಡಳಿತವು ಕೃಷ್ಣ, ವರ್ನಾ ಮತ್ತು ಕೊಯ್ನಾ ನದಿಗಳ ತೀರದಲ್ಲಿ ವಾಸಿಸುವ ಜನರನ್ನು ಜಾಗರೂಕರಾಗಿರಲು ಕೇಳಿಕೊಂಡಿದೆ.
ರೈಲ್ವೆ ವಿದ್ಯುತ್ ತಂತಿ ಮೇಲೆ ಬಿದ್ದ ಮರ
ರೈಲುಗಳು ಓಡಾಡಲು ಬೇಕಾದ ಓವರ್‌ಹೆಡ್ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಬೆಂಕಿ ಕಾಣಿಸಿಕೊಂಡ ಪರಿಣಾಮ ಮುಂಬೈ ವೆಸ್ಟರ್ನ್ ಮಾರ್ಗದ ಚರ್ಚ್‌ಗೇಟ್ ಮತ್ತು ಮುಂಬೈ ಸೆಂಟ್ರಲ್ ನಡುವಿನ ರೈಲು ಸೇವೆಗಳನ್ನು ನಿಲ್ಲಿಸಲಾಗಿದೆ.