ಮುಂಬೈ (ಮಹಾರಾಷ್ಟ್ರ): ಕೋವಿಡ್-19 ಪ್ರಕರಣ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರಿಗೂ ಸೋಂಕು ತಗುಲಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸಚಿವರ ಭದ್ರತಾ ಅಧಿಕಾರಿಯೊಬ್ಬರಲ್ಲಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರನ್ನು ಕಳೆದ 10 ದಿನಗಳಿಂದ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇದಕ್ಕೂ ಮೊದಲು ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಬಂದ ವರದಿಯಲ್ಲಿ ಸಚಿವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಚಿವರು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಕೆಲವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿ ಜೊತೆ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗ್ತಿದೆ.
ಈ ಮಾಹಿತಿಯನ್ನು ಹಿರಿಯ ಸಚಿವರೊಬ್ಬರು ಸುದ್ದಿ ಸಂಸ್ಥೆಗೆ ಖಚಿತಪಡಿಸಿದ್ದಾರೆ. ಆದರೆ ಎನ್‌ಸಿಪಿ ಅಥವಾ ಮಹಾರಾಷ್ಟ್ರ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.