ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬ್ಯಾಂಕಾಕ್ಗೆ ಪ್ರವಾಸ ಹೊರಟಿರುವುದು ಕಾಂಗ್ರೆಸ್ ನಾಯಕರಲ್ಲಿ ದಿಗಿಲು ಮೂಡಿಸಿದೆ.
ಎರಡೂ ರಾಜ್ಯಗಳ ನಾಯಕರ ನಡುವೆ ಭಿನ್ನಮತ ಹೆಚ್ಚಾಗುತ್ತಿರುವುದರ ಮಧ್ಯೆ ರಾಹುಲ್ ವಿದೇಶಕ್ಕೆ ಹಾರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಹರಿಯಾಣ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಅಶೋಕ್ ತನ್ವಾರ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯವಾಗಿ ಬಹಳ ದೊಡ್ಡ ಹೊಡೆತ ಎಂದು ರಾಜಕೀಯ ಪಂಡಿತರು ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಸಹ ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ ಬೆದರಿಕೆ ಹಾಕಿದ್ದಾರೆ.
ಚುನಾವಣೆ ನಡೆಯುತ್ತಿರುವ ಈ ರಾಜ್ಯಗಳ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು, ಅಸಮಾಧಾನಗಳನ್ನು ಬಗೆಹರಿಸುವ ಬದಲು ವಿದೇಶಕ್ಕೆ ಹೋಗುತ್ತಿರುವುದು ಎಷ್ಟು ಸರಿಯೆಂದು ಪಕ್ಷದ ಮುಖಂಡರು ಪ್ರಶ್ನಿಸಲಾಗದೆ ಸದ್ಯ ಮೌನಕ್ಕೆ ಶರಣಾಗಿದ್ದಾರೆ.