ಮುಂಬೈ : ನಗರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಮಧ್ಯೆಯೇ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಗಂಭೀರ ಆರೋಪವೊಂದನ್ನು ಮಾಡಿದ್ದು, ಮಹಾನಗರದ ಪಾಲಿಕೆ ಸುಮಾರು 950 ಕೋವಿಡ್ ಸಾವುಗಳನ್ನು ಮರೆಮಾಚಿದೆ ಎಂದಿದ್ದಾರೆ.
ಈ ಬಗ್ಗೆ ಸಿಎಂ ಉದ್ದವ್ ಠಾಕ್ರೆಗೆ ಪತ್ರ ಬರೆದಿರುವ ಅವರು, ಕೋವಿಡ್ ಸಂಬಂಧಿತ ಸಾವುಗಳ ಅಂಕಿ ಅಂಶ ಘೋಷಿಸುವ ಮೊದಲು ಅದು ಬೃಹತ್ ಮುಂಬೈ ಮಹಾನಗರದ ಪಾಲಿಕೆಯ ಡೆತ್ ಆಡಿಟ್ ಸಮಿತಿಗೆ ಹೋಗುತ್ತದೆ. ಬಳಿಕ ಘೋಷಣೆ ಮಾಡಲಾಗುತ್ತದೆ. ಆದರೆ, ಡೆತ್ ಆಡಿಟ್ ಸಮಿತಿ ಸುಮಾರು 950 ಜನರ ಸಾವನ್ನು ಕೋವಿಡ್ ಸಾವಲ್ಲ ಎಂದು ಹೇಳಿದೆ. ಐಸಿಎಂಆರ್ ಮಾರ್ಗ ಸೂಚಿ ಪ್ರಕಾರ ಅವು ಕೋವಿಡ್ ಸಾವುಗಳೇ ಆಗಿವೆ. ಆದರೆ, ಸಮಿತಿಯ ವರದಿಯಲ್ಲಿ ಮಾತ್ರ ಅವುಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಇದೊಂದು ಕ್ಷಮಿಸಲಾರದ ನಿರ್ಲಕ್ಷ್ಯ. ಅಷ್ಟೊಂದು ಮಟ್ಟದಲ್ಲಿ ಕೋವಿಡ್ ಸಾವುಗಳನ್ನು ಮರೆಮಾಚುವ ಹಿಂದಿನ ಉದ್ದೇಶವಾದರೂ ಏನು ಎಂದು ತಿಳಿಯಬೇಕು. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಫಡ್ನವಿಸ್ ಆಗ್ರಹಿಸಿದ್ದಾರೆ.