ನವದೆಹಲಿ: ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಕಂಡು ಬಂದಿರುವ ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ಗುಜರಾತ್ ಹಾಗೂ ಉತ್ತರಪ್ರದೇಶಕ್ಕೆ ಮೊದಲ ಹಂತವಾಗಿ 'ರೆಮ್‌ಡಿಸಿವರ್' ಔಷಧಿ ಪ್ರಾಯೋಗಿಕವಾಗಿ ಬಳಕೆಯಾಗಲಿದೆ. ಈಗಾಗಲೇ ಈ ರಾಜ್ಯಗಳಿಗೆ 20 ಸಾವಿರ ಬಾಟಲಿ ಔಷಧಿ ರವಾನಿಸಲಾಗಿದೆ ಎಂದು ಔಷಧ ಕಂಪನಿ ತಿಳಿಸಿದೆ.
ಭಾರತದಲ್ಲಿ 4.73 ಲಕ್ಷ ಕೊರೊನಾ ಕೇಸ್ ಕಂಡು ಬಂದಿದ್ದು, ಅದರಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಕಂಡು ಬಂದಿದ್ದು ಮಹಾರಾಷ್ಟ್ರ, ತಮಿಳುನಾಡು, ನವದೆಹಲಿ, ಗುಜರಾತ್ನಲ್ಲಿ. ಹೀಗಾಗಿ ಮೊದಲ ಹಂತದಲ್ಲಿ ಔಷಧಿ ಪ್ರಾಯೋಗಿಕವಾಗಿ ಬಳಕೆ ಮಾಡಲು ಭಾರತ ಮುಂದಾಗಿದೆ.
ಹೈದರಾಬಾದ್ ಮೂಲದ ಕಂಪನಿ ಹೆಟೆರೋ ಈ ಔಷಧಿ ತಯಾರಿಸಿದ್ದು, ಪ್ರಯೋಗಕ್ಕೆ ಮುಂದಾಗಿದೆ. ಉಳಿದಂತೆ ಕೋಲ್ಕತ್ತಾ, ಭೋಪಾಲ್, ಇಂದೋರ್, ಲಕ್ನೋ, ಭುವನೇಶ್ವರ್, ಕೊಚ್ಚಿ, ಗೋವಾ, ಪಾಟ್ನಾ, ವಿಜಯವಾಡದಲ್ಲಿ ಎರಡನೇ ಹಂತದಲ್ಲಿ ಔಷಧ ನೀಡಲು ನಿರ್ಧರಿಸಲಾಗಿದೆ.
ಔಷಧದ ಬೆಲೆ ಎಷ್ಟು? ಎಲ್ಲಿ ಸಿಗುತ್ತೆ?:
100 ಮಿಲಿ ಗ್ರಾಂ ಔಷಧದ ಬೆಲೆ ಸುಮಾರು 5,400 ರೂ ಆಗಿದ್ದು, ಕೊರೊನಾ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗೆ ದಿನಕ್ಕೆ 200 ಮಿಲಿ ಗ್ರಾಂ ಔಷಧ ನೀಡಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ಓರ್ವ ವ್ಯಕ್ತಿಗೆ ಆರು ಬಾಟಲಿಯಷ್ಟು ಔಷಧ ಅಗತ್ಯವಿರುತ್ತದೆ ಎಂದು ತಿಳಿದು ಬಂದಿದೆ. ಮುಂದಿನ ಮೂರು-ನಾಲ್ಕು ವಾರಗಳಲ್ಲಿ ಲಕ್ಷಾಂತರ ಮಿ.ಗ್ರಾಂ ಔಷಧ ತಯಾರು ಮಾಡಲು ಈ ಕಂಪನಿ ಮುಂದಾಗಿದೆ. ಈ ಔಷಧಿ ಯಾವುದೇ ಔಷಧ ಅಂಗಡಿಗಳಲ್ಲಿ ಲಭ್ಯವಿರುವುದಿಲ್ಲ. ನೇರವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರವಾನೆಯಾಗುತ್ತಿದೆ.
ಈ ಔಷಧ ಬಳಸುತ್ತಿದೆ ಅಮೆರಿಕ:
ಕೊರೊನಾ ನಿವಾರಣೆಗೆ 'ರಾಮಬಾಣ' ಎಂದೇ ಹೇಳಲಾಗುತ್ತಿರುವ ರೆಮ್‌ಡಿಸಿವರ್ ಡ್ರಗ್ ಅನ್ನು ಸೋಂಕಿತರಿಗೆ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಔಷಧ ತಯಾರಕ ಕಂಪನಿಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಉತ್ಪಾದನೆ ಮತ್ತು ಮಾರುಕಟ್ಟೆಗೆ ರವಾನಿಸಲು ಅನುಮೋದನೆ ಪಡೆದಿದೆ.