ಮುಂಬೈ: ಮಹಾರಾಷ್ಟ್ರದಲ್ಲಿ ಮಾಹಾಮಾರಿ ಕೊರೊನಾ ಆರ್ಭಟ ಜೋರಾಗಿದ್ದು, ವಾಣಿಜ್ಯ ನಗರಿ ಮುಂಬೈನಲ್ಲೇ ಬರೋಬ್ಬರಿ 51 ಸಾವಿರ ಪ್ರಕರಣಗಳು ಕಾಣಿಸಿಕೊಂಡಿದ್ದು, ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿರುವುದು ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಇಂದು 2,259 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 120 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 90,787 ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 42,638 ಜನರು ಸೋಂಕಿನಿಂದ ಗುಣಮುಖರಾಗಿದ್ದು, 44,849 ಆ್ಯಕ್ಟಿವ್ ಕೇಸ್ಗಳು ಚಾಲ್ತಿಯಲ್ಲಿವೆ. ಉಳಿದಂತೆ ಇಲ್ಲಿಯವರೆಗೆ 3,289 ಜನರು ಸಾವನ್ನಪ್ಪಿದ್ದಾರೆ.
ಕೋವಿಡ್ ಪ್ರಕರಣಗಳಲ್ಲಿ ಮಹಾರಾಷ್ಟ್ರ ಈಗಾಗಲೇ ಚೀನಾ ಹಿಂದಿಕ್ಕಿದ್ದು, ಪ್ರತಿದಿನ ಸಾವಿರಾರು ಹೊಸ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಅಲ್ಲಿನ ಸರ್ಕಾರದ ನಿದ್ದೆಗೆಡಿಸಿದೆ. ಉಳಿದಂತೆ ತಮಿಳುನಾಡಿನಲ್ಲಿ 33,229 ಕೇಸ್,ದೆಹಲಿಯಲ್ಲಿ 29,943, ಗುಜರಾತ್‍ನಲ್ಲಿ 20,545 ಪ್ರಕರಣಗಳಿವೆ.
ಅತಿ ಹೆಚ್ಚು ಸಾವು ಸಂಭವಿಸಿರುವ ಪೈಕಿ ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,280 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (874), ಮಧ್ಯಪ್ರದೇಶ (414), ಪಶ್ಚಿಮ ಬಂಗಾಳ (405), ತಮಿಳುನಾಡು (286), ಉತ್ತರಪ್ರದೇಶ (283), ರಾಜಸ್ಥಾನ (246), ತೆಲಂಗಾಣ (137), ಆಂಧ್ರಪ್ರದೇಶ (75), ಕರ್ನಾಟಕ(64), ಹಾಗೂ ಪಂಜಾಬ್ (53) ರಾಜ್ಯಗಳಿವೆ.