ಜಲ್ಗಾಂವ್ (ಮಹಾರಾಷ್ಟ್ರ): ಕಳೆದ 8 ದಿನಗಳಿಂದ ಕಾಣೆಯಾಗಿದ್ದ ಕೋವಿಡ್ -19 ರೋಗಿಯ ಮೃತದೇಹ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಭೂಸಾವಲ್ ಮೂಲದ 82 ವರ್ಷದ ವೃದ್ಧೆಯ ಶವ ಜಲ್ಗಾಂವ್ ಸಿವಿಲ್ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಕಳೆದ 8 ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ. ಶೌಚಾಲಯದಿಂದ ದುರ್ವಾಸನೆ ಬಂದ ನಂತರ ಬಾಗಿಲು ಮುರಿದು ನೋಡಿದಾಗ ವೃದ್ಧೆಯ ಮೃತದೇಹ ಪತ್ತೆಯಾಗಿದೆ.
ಈ ಘಟನೆ ಕುರಿತಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂನ್ 2 ರಿಂದ ಮಹಿಳೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿಯವರು ದೂರು ನೀಡಿದ್ದರು. ಜೂನ್ 6 ರಂದು ರೋಗಿಯ ಕುಟುಂಬಸ್ಥರು ಕೂಡ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಗುಲಾಬ್ರಾವ್ ಪಾಟೀಲ್ ತಪ್ಪಿತಸ್ಥರನ್ನು ತಕ್ಷಣವೇ ವಿಚಾರಣೆ ನಡೆಸಲಾಗುವುದು. ಈ ವಿಷಯವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.