ಅಯೋಧ್ಯೆ: ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳನ್ನು ಭಾರತಕ್ಕೆ ಮರಳಿ ಕರೆತರಬೇಕು ಮತ್ತು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಅಯೋಧ್ಯೆಯ ತಪಸ್ವಿ ಶಿಬಿರದ ಉತ್ತರಾಧಿಕಾರಿ ಮಹಂತ್ ಪರಮಹಂಸ ದಾಸ್ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಪೂಜೆ ನಡೆಸಿದ ಬಳಿಕ ಮಹಂತ್ ಪರಮಹಂಸ ದಾಸ್ ಅವರು ತಪಸ್ವಿ ಶಿಬಿರದ ಆಶ್ರಮದ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇವರ ಅನೇಕ ಶಿಷ್ಯರು ಸಹ ಅವರೊಂದಿಗೆ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. 2 ವರ್ಷಗಳ ಹಿಂದೆಯೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಒತ್ತಾಯಿಸಿ ದಾಸ್ ಅವರು ಒಂದು ವಾರಕ್ಕೂ ಹೆಚ್ಚು ಕಾಲ ಉಪವಾಸ ಕೈಗೊಂಡಿದ್ದರು.
"ದೇಶವನ್ನು ವಿಭಜಿಸಿದಾಗ, ಗರಿಷ್ಠ ಜನಸಂಖ್ಯೆಯ ಆಧಾರದ ಮೇಲೆ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವೆಂದು ಘೋಷಿಸಲಾಯಿತು. ಆದರೆ ಇಂದಿಗೂ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ. ಅದಕ್ಕಾಗಿಯೇ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇದಲ್ಲದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳನ್ನು ಮತ್ತೆ ಭಾರತಕ್ಕೆ ಕರೆತಂದು ಇಲ್ಲಿನ ಪೌರತ್ವ ನೀಡಬೇಕು" ಎಂದು ಮಹಂತ್ ಪರಮಹಂಸ ದಾಸ್ ಹೇಳಿದರು.
"ಭಾರತದ ಅಲ್ಪಸಂಖ್ಯಾತ ಸಮುದಾಯವು ತನ್ನ ಜನಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರೆ, ಒಂದು ದಿನ ಅವರು ಮತ್ತೆ ದೇಶದ ವಿಭಜನೆಯ ಬಗ್ಗೆ ಮಾತನಾಡುವಾಗ ದೇಶವು ಮತ್ತೆ ಬೇರ್ಪಡುವ ಅಪಾಯವಿದೆ. ಆದ್ದರಿಂದ ಭಾರತವನ್ನು ಈಗ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ನನ್ನ ಬೇಡಿಕೆಯನ್ನು ಅಂಗೀಕರಿಸುವ ತನಕ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ" ಎಂದು ದಾಸ್ ಘೋಷಿಸಿದರು.
ಈ ಹಿಂದೆ ವಿಶೇಷ ಸಂವಾದದಲ್ಲಿ ಭಾಗಿಯಾಗಿದ್ದ ಮಹಂತ್ ಪರಮಹಂಸ ದಾಸ್ ಅವರು, "ತ್ರಿವಳಿ ತಲಾಖ್, ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ದೇಶದ ಹಿತದೃಷ್ಟಿಯಿಂದ ಏನು ಬೇಕಾದರೂ ಮಾಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಿದ್ದಾರೆ" ಎಂದಿದ್ದರು.