ಜಲ್ನಾ (ಮಹಾರಾಷ್ಟ್ರ) : ಕೋವಿಡ್ ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ್ದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.93 ರೂ. ಲಕ್ಷ ಪಾವತಿಸುವಂತೆ ಖಾಸಗಿ ಆಸ್ಪತ್ರೆಯೊಂದಕ್ಕೆ ಜಿಲ್ಲಾಡಳಿತ ಆದೇಶಿಸಿದೆ.
ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ಹೆಚ್ಚಿನ ಹಣವನ್ನು ಪಡೆಯುತ್ತಿದೆ ಎಂಬ ದೂರಿನ ಹಿನ್ನೆಲೆ ಪರಿಶೀಲನೆ ನಡೆಸಿದ ಜಲ್ನಾ ಜಿಲ್ಲಾಧಿಕಾರಿ ರವೀಂದ್ರ ಬಿನ್ವಾಡೆ ಈ ಆದೇಶ ಹೊರಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ವಿಧಿಸುತ್ತಿರುವ ಶುಲ್ಕದ ಬಗ್ಗೆ ಪರಿಶೀಲನೆ ನಡೆಸಲು ಆಡಿಟರ್ಗಳನ್ನು ನೇಮಕ ಮಾಡಲಾಗಿತ್ತು. ಪರಿಶೀಲನೆ ವೇಳೆ ಜಲ್ನಾದ ವಿವೇಕಾನಂದ ಆಸ್ಪತ್ರೆ 1,93,986 ರೂ. ಶುಲ್ಕ ವಿಧಿಸಿರುವುದು ಗೊತ್ತಾಗಿದೆ. ಹೀಗಾಗಿ, ದಂಡ ವಿಧಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಕಳೆದ ತಿಂಗಳು ಕೂಡ ಕೋವಿಡ್ ರೋಗಿಗೆ ಅಧಿಕ ಶುಲ್ಕ ವಿಧಿಸಿದ ಆರೋಪದ ಮೇಲೆ ಆರೋಗ್ಯಂ ಖಾಸಗಿ ಆಸ್ಪತ್ರೆಯ ಪರವಾನಿಗಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿತ್ತು. ಇನ್ನೂ, ಹಲವು ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಅಧಿಕ ಶುಲ್ಕ ವಿಧಿಸಿದ ಆರೋಪಗಳಿವೆ.
ಜಿಲ್ಲೆಯ 11 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಆರೋಗ್ಯ ಯೋಜನೆಗಳಾದ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ ಮತ್ತು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾಡಳಿತ ಸಮಿತಿಯೊಂದನ್ನು ನೇಮಿಸಿದೆ.