ತಮಿಳುನಾಡು: ಮಧುರೈ ಅಂದ್ರೆ ನೆನಪಾಗೋದು ಮೀನಾಕ್ಷಿ ದೇವಾಲಯ, ಜಲ್ಲಿಕಟ್ಟು, ತಿರುಮಲೈ ನಾಯಕರ್ ಮಹಲ್, ಮಲ್ಲಿಗೆ ಹೂ,ಮತ್ತು ಮಧುರೈ ಇಡ್ಲಿ. ಇಲ್ಲಿವರೆಗೂ ಇಷ್ಟಕ್ಕೆ ಫೇಮಸ್ ಆಗಿದ್ದ ಮಧುರೈ ಇದೀಗ ''ಜಿಗರ್ಥಂಡ'' ಎನ್ನುವ ಶೇಕ್ ನಿಂದ ಬರೀ ದೇಶಿಗರಷ್ಟೇ ಅಲ್ಲ ವಿದೇಶೀಯರ ಬಾಯಲ್ಲೂ ನೀರೂರುವಂತೆ ಮಾಡಿದೆ.
ಮಧುರೈನಲ್ಲಿ ಸಿಗುವ ಈ ಜಿಗರ್ಥಂಡ ಬೇರೆಲ್ಲೂ ಸಿಗೋದಿಲ್ಲ. ಹೀಗಾಗಿ ಜನ ಈ ಶೇಕ್ ಕುಡಿಯೋಕೆ ಅಂತಾನೇ ಇಲ್ಲಿಗೆ ಬರ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರು, ವೃದ್ಧರಿಗೂ ಈ ಶೇಕ್ ಅಚ್ಚುಮೆಚ್ಚು. ಮಧುರೈಗೆ ಬರುವ ಪ್ರವಾಸಿಗರಂತೂ ಜಿಗರ್ಥಂಡ ಟೇಸ್ಟ್ ಮಾಡದೆ ಇಲ್ಲಿಂದ ಹೋಗಲ್ಲ. ಅಷ್ಟರ ಮಟ್ಟಿಗೆ ಈ ಶೇಕ್ ಜನರಿಗೆ ರುಚಿ ಹತ್ತಿಸಿದೆ.
ಹಾಲಿಗೆ ಬಾದಾಮಿ , ಕಡಲೇಕಾಯಿ, ಶರ್ಬತ್, ಚೀಸ್ ಮತ್ತು ಬಸಂತಿ ಐಸ್ಕ್ರೀಮ್ ಅನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಹಾಲಿನಲ್ಲಿ ಬೇಯಿಸಿ ಜಿಗರ್ತಂಡವನ್ನು ತಯಾರಿಸಲಾಗುತ್ತೆ. ಇದರಲ್ಲಿ ಅತ್ಯಧಿಕ ವಿಟಮಿನ್ಸ್, ಪ್ರೋಟಿನ್ ಇರೋದ್ರಿಂದ ಜನ ಇದನ್ನು ಚಪ್ಪರಿಸಿ ಸೇವಿಸುತ್ತಾರೆ. ಚಳಿಗಾಲದಲ್ಲಂತು ಬೇಡಿಕೆ ತುಸು ಹೆಚ್ಚೇ ಇರುತ್ತೆ. ದೊಡ್ಡ ಅಂಗಡಿಗಳಷ್ಟೇ ಅಲ್ಲ, ಸಣ್ಣ ಸಣ್ಣ ರಸ್ತೆ ಬದಿಯ ಅಂಗಡಿಗಳಲ್ಲೂ ಜಿಗರ್ಥಂಡ ಲಭ್ಯವಿದ್ದು, ಅತೀ ಹೆಚ್ಚು ಮಾರಾಟವಾಗುತ್ತೆ.
ಮಧುರೈಗೆ ಬರುವ ಪ್ರವಾಸಿಗರು ಅದರಲ್ಲೂ ಉತ್ತರ ಭಾರತದ ಪ್ರವಾಸಿಗರನ್ನುಜಿಗರ್ಥಂಡ ಕುಡಿಯೋದನ್ನು ಮಿಸ್ ಮಾಡಿಕೊಳ್ಳೋದೆ ಇಲ್ಲ. ಈ ಮಟ್ಟಿಗೆ ಜಿಗರ್ಥಂಡ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಸಿಂಗಾಪುರದ ಪ್ರವಾಸಿಗರು ಸಹ ಜಿಗರ್ಥಂಡ ಟೇಸ್ಟ್ಗೆ ಫಿದಾ ಆಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಇದೇ ಮೊದಲ ಬಾರಿ ಜಿಗರ್ಥಂಡ ಸಿಂಗಾಪುರ್ಗೆ ರಫ್ತಾಗುತ್ತಿದ್ದು, ವಿದೇಶಕ್ಕೆ ರಫ್ತಾಗುವ ಮಟ್ಟಕ್ಕೆ ತನ್ನ ರುಚಿಯಿಂದ ಮೋಡಿ ಮಾಡಿದೆ.
ಅಷ್ಟೇ ಅಲ್ಲ, ಜಿಗರ್ಥಂಡ ಮಾರಾಟ ಮಾಡುವ ಅಂಗಡಿಗಳು ಕೂಡ ಹೆಚ್ಚಿನ ಲಾಭ ಗಳಿಸುತ್ತಿದ್ದು, ವ್ಯಾಪಾರಿಗಳಿಗೆ ಅನುಕೂಲವಾಗಿದೆ ಅಂತಾರೆ ಶಾಪ್ ಮಾಲೀಕರು. ಇನ್ನು ಈ ಶೇಕ್ ವಿದೇಶಕ್ಕೆ ರಫ್ತಾಗುತ್ತಿರುವುದಕ್ಕೆ ಇಲ್ಲಿನ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ರಫ್ತು ಬೇರೆ ದೇಶಗಳಿಗೂ ವಿಸ್ತರಿಸಬೇಕು ಎಂಬುದು ಜಿಗರ್ಥಂಡ ಮಾರಾಟಗಾರರ ಬಯಕೆ.