ಸತ್ನಾ (ಮಧ್ಯ ಪ್ರದೇಶ): ಇಡೀ ದೇಶವು ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಜನ ಏನಾದರೂ ಕೆಲಸ ಮಾಡಲು ವಿಭಿನ್ನ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆದರೆ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಲಾಕ್ ಡೌನನ್ನು ಸದುಪಯೋಗ ಪಡಿಸಿಕೊಂಡವರೂ ಇದ್ದಾರೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಬುಡಕಟ್ಟು ಜನಾಂಗದ ದಂಪತಿ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಲಾಕ್‌ಡೌನ್ ಅವಧಿಯಲ್ಲಿ 18 ಅಡಿ ಆಳದ ಬಾವಿ ಅಗೆಯುವ ಮೂಲಕ ತಮ್ಮ ಸಮಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
21 ದಿನಗಳ ಲಾಕ್‌ಡೌನ್ ಘೋಷಣೆಯಾದ ಬಳಿಕ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಬರ್ಹಾ ಮಾವಾನ್ ನಿವಾಸಿಗಳಾದ ಚೋಟು ಮಾವಾಸಿ ಮತ್ತು ಅವರ ಪತ್ನಿ ರಾಜಲಾಲಿ ಮಾವಾಸಿ ತಮ್ಮ ಮನೆಯ ಹೊರಗೆ ಬಾವಿ ಅಗೆಯಲು ಪ್ರಾರಂಭಿಸಿದ್ದರು.
"ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ನಾವು ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ನೀರಿನ ಕೊರತೆಯು ತೀವ್ರ ಸಮಸ್ಯೆಯನ್ನು ಉಂಟುಮಾಡುತ್ತಿತ್ತು. ಹೀಗಾಗಿ ನೀರಿನ ಕೊರತೆ ನೀಗಿಸಲು ನಿರ್ಧರಿಸಿ ಲಾಕ್‌ಡೌನ್ ಅವಧಿಯಲ್ಲಿ ನಮ್ಮ ಮನೆಯ ಹಿತ್ತಲಿನಲ್ಲಿ ಬಾವಿ ಅಗೆಯಲು ಪ್ರಾರಂಭಿಸಿದೆವು. ಬಾವಿ ಅಗೆಯಲು 20ಕ್ಕೂ ಹೆಚ್ಚು ದಿನಗಳನ್ನು ತೆಗೆದುಕೊಂಡೆವು. ನೆಲದೊಳಗಿನ ಬೃಹತ್ ಬಂಡೆಗಳನ್ನು ಅಗೆದು ಒಡೆದಿದ್ದೇವೆ" ಎಂದು ಚೋಟು ಮಾವಾಸಿ ಹೇಳಿದ್ದಾರೆ.
"ಇತರರ ಮುಂದೆ ಕೈ ಚಾಚುವುದಕ್ಕಿಂತ ಸ್ವಾವಲಂಬಿಯಾಗುವುದು ಉತ್ತಮ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಮನವಿ ಮಾಡಿದ್ದಾರೆ. ಈ ಪ್ರೇರಣೆಯಿಂದಲೇ ನಾವು ಈ ಕೆಲಸ ಮಾಡಿದ್ದೇವೆ. ಈ ಲಾಕ್‌ಡೌನ್ ಸಮಯದಲ್ಲಿ ಅದೇ ಬಾವಿಯಿಂದ ನೀರನ್ನು ಬಳಸಿ ತರಕಾರಿಗಳನ್ನು ಬೆಳೆಸಲು ಪ್ರಾರಂಭಿಸಿದ್ದೇವೆ. ನಮ್ಮ ನೀರಿನ ತೊಂದರೆ ಈಗ ಶಾಶ್ವತ ಪರಿಹಾರ ಕಂಡಿರುವುದರಿಂದ ಬಹಳ ಸಂತೋಷವಾಗಿದೆ" ಎಂದು ಅವರು ಹೇಳಿದರು.
ಈ ಘಟನೆಯ ಬಗ್ಗೆ ತಿಳಿದ ಸ್ಥಳೀಯ ಬಿಜೆಪಿ ಸಂಸದ ಗಣೇಶ್ ಸಿಂಗ್, ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ಬಾವಿಯನ್ನು ಅಗಲಗೊಳಿಸಲು ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ.