ಲಖನೌ: ದೇಶಾದ್ಯಂತ ಲಾಕ್ಡೌನ್ ಘೋಷಣೆಯಾದ ಬಳಿಕ ಉತ್ತರಪ್ರದೇಶದ ಲಖನೌದಲ್ಲಿನ ಕಾರ್ಡಿಯಾಲಜಿ ಆಸ್ಪತ್ರೆಗಳು ರೋಗಿಗಳಿಲ್ಲದೇ ಬಣಗುಡುತ್ತಿವೆ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇ.60 ರಷ್ಟು ಕಡಿಮೆಯಾಗಿದೆ.
ಹೃದಯ ರೋಗ ಚಿಕಿತ್ಸೆಗೆ ಹೆಸರುವಾಸಿಯಾದ ಲಖನೌದ ಕೆಜಿಎಂಯುನ ಲಾರಿ ಕಾರ್ಡಿಯಾಲಜಿ ಸೆಂಟರ್ ರೋಗಿಗಳಿಂದ ತುಂಬಿರುತ್ತಿತ್ತು. ಹೆಚ್ಚು ಅಂದರೇ ದಿನಕ್ಕೆ 650 ರೋಗಿಗಳು ಬರುತ್ತಿದ್ದರು. ಇದರಲ್ಲಿ ಒಂದು ಅಥವಾ ಎರಡು ರೋಗಿಗಳ ಸ್ಥಿತಿ ಗಂಭೀರವಾಗಿರುತ್ತಿತ್ತು. ಆದ್ರೀಗ ಲಾಕ್ಡೌನ್ ಘೋಷಣೆಯಾದ ಬಳಿಕ ಆಸ್ಪತ್ರೆಗೆ ರೋಗಿಗಳು ಬರುವುದು ತೀರಾ ಕಡಿಮೆಯಾಗಿದೆ.
ಲಾಕ್ಡೌನ್ ನಂತರ ರೋಗಿಗಳ ಸಂಖ್ಯೆಯಲ್ಲಿ ಶೇ. 60 ರಿಂದ 70 ರಷ್ಟು ಕುಸಿತ ಕಂಡುಬಂದಿದೆ ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ವಿ.ಎಸ್.ನಾರಾಯಣ್ ತಿಳಿಸಿದ್ದಾರೆ.
ರೋಗಿಗಳು ಆಸ್ಪತ್ರೆಗೆ ಬರುವ ಸಂಖ್ಯೆಯಲ್ಲಿ ಕಡಿಮೆಯಾಗಿರುವುದಕ್ಕೆ ನಾವು ಕಾರಣಗಳನ್ನು ನೋಡುವುದಾದರೇ, ಕೆಲವರಿಗೆ ಆಸ್ಪತ್ರೆ ತೆರೆದಿರುತ್ತದೆ ಎಂಬುದೇ ತಿಳಿದಿರುವುದಿಲ್ಲ. ಹೃದಯ ರೋಗಿಗಳು ಕೊರೊನಾ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಹಾಗಾಗಿ ಅವರು ಹೊರ ಹೋಗುವುದನ್ನು ತಪ್ಪಿಸುತ್ತಾರೆ. ಮತ್ತೆ ಸಾರಿಗೆ ಸೌಲಭ್ಯ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದೆಂದು ನಾರಾಯಣ್ ಹೇಳುತ್ತಾರೆ.
ಲಾಕ್ಡೌನ್ ಬಳಿಕ ತುರ್ತು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಹೃದಯ ತಜ್ಞ, ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ಆಸ್ಪತ್ರೆಯ ಸಲಹೆಗಾರ ಡಾ.ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೃದ್ರೋಗ ತಜ್ಞ ಡಾ.ಆದಿತ್ಯ ಕಪೂರ್ ಅವರ ಪ್ರಕಾರ, "ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹೃದಯ ಸಂಬಂಧಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಎಸ್‌ಜಿಪಿಜಿಐ,ತುರ್ತು ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 70 ರಷ್ಟು ಕುಸಿತವಾಗಿದೆ. ಹೃದಯಾಘಾತ ಮತ್ತು ಹೃದಯದಲ್ಲಿ ಹೋಲು ಇರುವ ಪ್ರಕರಣಗಳು ಸಹ ಕಡಿಮೆಯಾಗಿದೆ ಎಂದರು.
ಅಮೆರಿಕನ್ ಜರ್ನಲ್ ಪ್ರಕಾರ, ಕೊರೊನಾ ವೈರಸ್ ಪ್ರಾರಂಭವಾದ ಮೊದಲ ತಿಂಗಳಲ್ಲಿ ಹೃದಯ ಸಂಬಂಧಿತ ರೋಗಿಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಸ್ಪೇನ್‌ನ ವಿಷಯದಲ್ಲಿ, ಈ ಕುಸಿತವು ಶೇಕಡಾ 70 ರಷ್ಟು ಕಂಡುಬಂದಿದೆ" ಎಂದು ಕಪೂರ್ ಹೇಳಿದರು .
ಡಾ. ರಾಮ್ ಮನೋಹರ್ ಲೋಹಿಯಾ ಆಯುರ್ವೇದ ಸಂಸ್ಥೆಯ ಹೃದ್ರೋಗ ತಜ್ಞ ಡಾ. ಭುವನ್ ಚಂದ್ರ ಅವರ ಪ್ರಕಾರ, ನಗರಕ್ಕಿಂತ ಹೊರಗಿನ ಜಿಲ್ಲೆಗಳಿಂದ ಹೆಚ್ಚಿನ ರೋಗಿಗಳು ಬರುತ್ತಿದ್ದರು. ಲಾಕ್ಡೌನ್ ನಂತರ ಈ ರೋಗಿಗಳು ತಮ್ಮ ಸ್ವಂತ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದ್ದಾರೆ. ಕೆಲವು ರೋಗಿಗಳು ಫೋನ್ನಲ್ಲೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.