ಬಾಂಸ್ವಾಡ(ರಾಜಸ್ಥಾನ): ಜಿಲ್ಲೆಯ ದಾನಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಯುವಕ-ಯುವತಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಾವನ್ನಪ್ಪಿರುವ ಯುವಕನನ್ನು 21 ವರ್ಷದ ದಾಮೋರ್, ಯುವತಿಯನ್ನು 19 ವರ್ಷದ ದುರ್ಗಾ ಎಂದು ಗುರುತಿಸಲಾಗಿದೆ. ಇಬ್ಬರೂ ಚಾಯನ್ ಬಡಿ ಗ್ರಾಮದ ನಿವಾಸಿಗಳಾಗಿದ್ದರು. ಯುವಕನ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಯುವತಿಯ ಬಾಯಿಯಿಂದ ನೊರೆ ಹರಿದಿದ್ದು, ಕೀಟನಾಶಕವನ್ನು ಕುಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮಾಹಿತಿ ನೀಡಿರುವ ಪೊಲೀಸರು, ಸಾವನ್ನಪ್ಪಿದ ಇಬ್ಬರು ಪ್ರೇಮಿಗಳಾಗಿದ್ದು, ಘಟನೆಯನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಆದರೆ ಸಂಬಂಧಿಕರು ಕೊಲೆಯ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.