ಬೆಂಗಳೂರು: 17ನೇ ಲೋಸಭೆಗೆ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುತ್ತಿರುವ 2019ರ ಲೋಕಸಮರದ 2ನೇ ಹಂತದ ಮತದಾನವು ಇಂದು ಮುಕ್ತಾಯವಾಗಿದೆ.
13 ರಾಜ್ಯ, 95 ಕ್ಷೇತ್ರಗಳ 1,586 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಸಂಜೆ 6 ಗಂಟೆಯವರೆಗಿನ ಮಾಹಿತಿ ಪ್ರಕಾರ ಶೇ 64.90ರಷ್ಟು ಮತದಾರರು ತಮ್ಮ ಸಂವಿಧಾನದತ್ತ ಹಕ್ಕನ್ನು ಚಲಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ, ಮನೆ ಮನೆ ಪ್ರಚಾರ, ಬಹಿರಂಗ ಪ್ರಚಾರ, ಚುನಾವಣಾ ರಾಯಭಾರಿಗಳ ಮೂಲಕ ಸಾಕಷ್ಟು ಜಾಗೃತಿ ನಡೆಸಿದ್ದ ಫಲವಾಗಿ ದೇಶಾದ್ಯಂತ ಮತದಾನದ ಪ್ರಮಾಣವೂ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ.
ಇಂದು ಒಟ್ಟು 97 ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲದ ಕಾರಣ ತ್ರಿಪುರಾದ ಒಂದು ಕ್ಷೇತ್ರದಲ್ಲಿ ಹಾಗೂ ಭಾರಿ ಪ್ರಮಾಣದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ರದ್ದಾಗಿ ಮುಂದೂಡಲಾಗಿದೆ.
ಒಟ್ಟು 17.09 ಕೋಟಿ ಮತದಾರರಲ್ಲಿ ಶೇ. 64.90 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದುವರೆಗಿನ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳ ಶೇ. 76.43ರಷ್ಟು ಮತದಾನವಾಗಿದ್ದು, ಅತ್ಯಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಸ್ಸೊಂ- ಶೇ 75.85, ಬಿಹಾರ- ಶೇ 62.44, ಉತ್ತರ ಪ್ರದೇಶ- ಶೇ. 62.50, ಕರ್ನಾಟಕ- ಶೇ. 66.06, ಜಮ್ಮು ಮತ್ತು ಕಾಶ್ಮೀರ್- ಶೇ 44.09, ಮಹಾರಾಷ್ಟ್ರ- ಶೇ. 58.29, ಮಣಿಪುರ- ಶೇ 76.15, ಒಡಿಶಾ- ಶೇ 57.81, ತಮಿಳುನಾಡು- ಶೇ. 63.77, ಛತ್ತೀಸ್ಗಢ- ಶೇ. 70.99 ಹಾಗೂ ಪುದುಚೇರಿ- ಶೇ. 75.07ರಷ್ಟು ಮತdಆನ ದಾಖಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದೆ.