ಹೈದರಾಬಾದ್: ಉತ್ತರ ಭಾರತಕ್ಕೆ ದಾಳಿ ನಡೆಸಿರುವ ಮಿಡತೆಗಳ ಹಿಂಡು ತೆಲಂಗಾಣದ ಕೆಲವು ಜಿಲ್ಲೆಗಳಿಗೂ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತೆಲಂಗಾಣದ ಕೃಷಿ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.
ಈಗಾಗಲೇ ನೆರೆಯ ಮಹಾರಾಷ್ಟ್ರದ ಅಮರಾವತಿಗೆ ಮಿಡತೆಗಳು ದಾಳಿ ನಡೆಸಿದ್ದು, ಅಲ್ಲಿಂದ ತೆಲಂಗಾಣದ ಆದಿಲಾಬಾದ್ ಕೇವಲ 200 ಕಿ.ಮೀ. ದೂರದಲ್ಲಿದೆ. ಗಾಳಿಯ ವೇಗ ಅನುಕೂಲಕರವಾಗಿದ್ದರೆ ಮಿಡತೆಗಳು ಉತ್ತರ ತೆಲಂಗಾಣದ ಕಡೆಗೆ ಆಗಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಿಡತೆ ದಾಳಿಯನ್ನು ಎದುರಿಸಲು ಅಗತ್ಯ ಪ್ರಮಾಣದಲ್ಲಿ ಕೀಟನಾಶಕ ಸಿದ್ಧವಾಗಿಡಲು ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಕೃಷಿ ಆಯುಕ್ತ ಬಿ.ಜನಾರ್ಧನ ರೆಡ್ಡಿ, ಮಿಡತೆಗಳು ಮಹಾರಾಷ್ಟ್ರದಲ್ಲೇ ಇರದಿದ್ದರೆ ತೆಲಂಗಾಣಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ನಿಜಾಮಾಬಾದ್, ಕಾಮರೆಡ್ಡಿ, ಮಂಚೇರಿಯಲ್, ಜಯಶಂಕರ್ ಭೂಪಾಲ್ಪಲ್ಲಿ, ಆದಿಲಾಬಾದ್ ಮತ್ತು ಕುಮಾರಂ ಭೀಮ್ ಜಿಲ್ಲೆಗಳನ್ನು ಎಚ್ಚರಿಸಲಾಗಿದೆ ಎಂದಿದ್ದಾರೆ.
ಜೂನ್ ವೇಳೆಗೆ ಮಿಡತೆಗಳ ಸಂಖ್ಯೆ 400 ಪಟ್ಟು ಹೆಚ್ಚಾಗುತ್ತದೆ ಎಂದು ಕೃಷಿ ವಿಜ್ಞಾನಿಗಳು ಹೇಳಿದ್ದಾರೆ. ಮಿಡತೆಗಳು ಗಂಟೆಗೆ 1.2 ಕಿ.ಮೀ.ನಿಂದ 1.5 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಬೆಳೆಗಳ ಮೇಲೆ ದಾಳಿ ಮಾಡಿ ವ್ಯಾಪಕ ಹಾನಿಯನ್ನುಂಟು ಮಾಡುತ್ತವೆ ಎಂದು ಹೇಳಿದ್ದಾರೆ. ಒಂದು ಚದರ ಕಿ.ಮೀ. ವ್ಯಾಪ್ತಿಯ ಸಮೂಹದಲ್ಲಿ 150 ಮಿಲಿಯನ್ ಮಿಡತೆಗಳು ಇರುವ ಸಾಧ್ಯತೆ ಇದ್ದು, ಇವು ಒಂದು ದಿನದಲ್ಲಿ ಸುಮಾರು 35,000 ಜನರು ಸೇವಿಸುವ ಆಹಾರವನ್ನು ಸೇವಿಸಬಹುದು ಎಂದು ತಜ್ಞರು ಹೇಳಿದ್ದಾರೆ.