ಪಣಜಿ: ಮದ್ಯ ಪ್ರಿಯರಿಗೆ ಗೋವಾದಿಂದ ಖುಷಿ ಸುದ್ದಿಯೊಂದು ಬಂದಿದೆ. ಲಾಕ್ಡೌನ್ನಿಂದಾಗಿ ಬೀಯರ್, ವಿಸ್ಕಿ, ರಮ್, ಬ್ರ್ಯಾಂಡಿ ಸಿಗದಿದ್ದರೂ ಗೋವಾದಲ್ಲಿ ಹುರಾಕ್ ದೇಶಿ ಮದ್ಯ ಧಾರಾಳವಾಗಿ ಸಿಗುತ್ತಿದೆ. ಗೋವಾದ ಊರುಗಳ ಮೂಲೆಮೂಲೆಗಳಲ್ಲಿ ಹುರಾಕ್ ತಯಾರಿಸುವ ಡಿಸ್ಟಿಲರಿಗಳಿದ್ದು, ಜನ ಹುರಾಕ್ಗೆ ಮುಗಿ ಬಿದ್ದಿದ್ದಾರೆ. ಹುರಾಕ್ ಅಥವಾ ಓರಾಕ್ ಎಂದು ಸ್ಥಳೀಯವಾಗಿ ಇದನ್ನು ಕರೆಯಲಾಗುತ್ತದೆ.
"ಹುರಾಕ್ಗೆ ಬೇಡಿಗೆ ಭಾರಿ ಹೆಚ್ಚಾಗುತ್ತಿದೆ. ಹೇಗಾದರೂ ಮಾಡಿ ಹುರಾಕ್ ಖರೀದಿಸಿ, ಕುಡಿಯಲು ಜನ ಹಾತೊರೆಯುತ್ತಿದ್ದಾರೆ." ಎಂದು ಗೋಡಂಬಿ ಡಿಸ್ಟಿಲರಿ ಹಾಗೂ ಬಾಟ್ಲಿಂಗ್ ಅಸೋಸಿಯೇಶನ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಮ್ಯಾಕ್ ವಾಜ್ ಹೇಳಿದ್ದಾರೆ.
ಗೋಡಂಬಿ ಹಣ್ಣುಗಳಿಂದ ತಯಾರಿಸಲಾಗುವ ಹುರಾಕ್ ಮದ್ಯವನ್ನು ಮಾರುಕಟ್ಟೆಯಲ್ಲಿ ಮಾರುವುದಿಲ್ಲ. ಗೋವಾದ ಹಳ್ಳಿಗಳಲ್ಲಿರುವ ಡಿಸ್ಟಿಲರಿಗಳಲ್ಲಿ ತಯಾರಿಸಿ ಅಲ್ಲಿಯೇ ಬಾಟಲಿಗಳಿಗೆ ಇದನ್ನು ತುಂಬಿಸಲಾಗುತ್ತದೆ. 100 ರೂ.ಗೆ 1 ಲೀಟರ್ ಹುರಾಕ್ ಮದ್ಯ ಸಿಗುತ್ತಿದ್ದು, ಬೇಡಿಕೆ ಹೆಚ್ಚಾದರೂ ಇದರ ತಯಾರಕರು ಬೆಲೆ ಹೆಚ್ಚಿಸಿಲ್ಲ ಎನ್ನುತಾರೆ ವಾಜ್.
ಹುರಾಕ್ ಅನ್ನು ಬಹುತೇಕ ಮನೆಗಳಲ್ಲಿ ಕುಡಿಯಲು ಉಪಯೋಗಿಸಲಾಗುತ್ತದೆ ಹಾಗೂ ಇದನ್ನು ಬಹಳ ಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳಲಾಗದು ಎನ್ನುತ್ತಾರೆ ಪೋಂಡಾ ಬಳಿಯ ಗೋಡಂಬಿ ಕೃಷಿಕ ವಿಕಾಸ ಪ್ರಭು.
ಹುರಾಕ್ ಸೀಸನ್ಗಾಗಿ ಜನ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ಲಾಕ್ಡೌನ್ನಿಂದಾಗಿ ಬೇರಾವುದೇ ಮದ್ಯ ಸಿಗುತ್ತಿಲ್ಲವಾದ್ದರಿಂದ ಹುರಾಕ್ಗೆ ಭಾರಿ ಬೇಡಿಕೆ ಬಂದಿದೆ. ಇದರಿಂದ ಗೋಡಂಬಿ ಬೆಳೆಗಾರರು ಸಹ ಸಕತ್ ಖುಷಿಯಾಗಿದ್ದು, ಒಂದಿಷ್ಟು ಲಾಭ ಮಾಡಿಕೊಳ್ಳುವ ಸಿದ್ಧತೆ ನಡೆಸಿದ್ದಾರೆ.