ನವದೆಹಲಿ: ಬೇರೆ ಬೇರೆ ರಾಜ್ಯಗಳಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಮ್ಮ ರಾಜ್ಯಗಳಿಗೆ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಕಳೆದೆರಡು ದಿನಗಳ ಹಿಂದೆ ಸೂಚನೆ ನೀಡಿದ್ದ ಕೇಂದ್ರ ಸರ್ಕಾರ ಇದೀಗ ವಿಶೇಷ ರೈಲುಗಳ ಮೂಲಕ ಅವರನ್ನ ರವಾನಿಸುವಂತೆ ಮಹತ್ವದ ಆದೇಶ ಹೊರಹಾಕಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ, ಪುಣ್ಯ ಶ್ರೀವಾತ್ಸವ್,ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಯಾತ್ರಿಕರನ್ನ ವಿಶೇಷ ರೈಲುಗಳ ಮೂಲಕ ಅವರ ರಾಜ್ಯಗಳಿಗೆ ಕಳುಹಿಸಿಕೊಡಲಾಗುವುದು ಎಂದಿದ್ದಾರೆ.
ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ರವಾನೆ ಮಾಡಲು ಕೇಂದ್ರ ರೈಲ್ವೆ ಇಲಾಖೆಗೆ ಸೂಚನೆ ನೀಡಲಾಗಿದ್ದು, ಅದು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಈಗಾಗಲೇ ಎಲ್ಲ ರಾಜ್ಯಗಳು ನೊಡೆಲ್ ಅಧಿಕಾರಿಗಳ ನೇಮಕ ಮಾಡಿದ್ದು, ಪ್ರಯಾಣ ಬೆಳೆಸಲು ಟಿಕೆಟ್ ತೆಗೆದುಕೊಳ್ಳುವಾಗ, ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಅವಶ್ಯಕವಾಗಿದೆ. ಇಂದು ಮುಂಜಾನೆ ತೆಲಂಗಾಣದಿಂದ 1200ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಹೊತ್ತು ವಿಶೇಷ ರೈಲು ಜಾರ್ಖಂಡ್ಗೆ ಪ್ರಯಾಣ ಬೆಳೆಸಿದೆ.
ವಿವಿಧ ರಾಜ್ಯಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಇರುವ ಕಾರಣ ಅವರನ್ನ ಬಸ್ಗಳಲ್ಲಿ ಕರೆದುಕೊಂಡು ಹೋಗಲು ಆಗದ ಕಾರಣ ರೈಲುಗಳಲ್ಲಿ ತವರು ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.