ಅರ್ವಾಲ್(ಬಿಹಾರ) : ಲಾಕ್ಡೌನ್ ಕೇವಲ ಕೂಲಿ ಕಾರ್ಮಿಕರು, ವಲಸಿಗರಿಗೆ ತೊಂದರೆಯಾಗಿ ಪರಿಣಮಿಸಿಲ್ಲ. ಇಲ್ಲೊಬ್ಬ ಆಸಾಮಿ ತನ್ನ ಮೂರು ಜನ ಹೆಂಡತಿಯರು ಹಾಗೂ ಒಂದು ಡಜನ್ ಮಕ್ಕಳನ್ನು ನೋಡಿಕೊಳ್ಳಲು ಹೆಣಗಾಡುತ್ತಿದ್ದಾನೆ.
ಬಿಹಾರದ ಅರ್ವಾಲ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಹುಸೇನ್ ಅವರು ಮೂರು ಹೆಂಡತಿಯರು ಮತ್ತು ಒಂದು ಡಜನ್ ಮಕ್ಕಳನ್ನು ಹೊಂದಿದ್ದಾರೆ. ಲಾಕ್ಡೌನ್ ಮುಂಚೆ ಹೇಗೋ ಜೀವನ ಸಾಗಿಸುತ್ತಿದ್ದ ಇವರೀಗ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹುಸೇನ್ ಕೂಲಿ ಕೆಲಸಗಾರ. ಅಲ್ವ ಸ್ವಲ್ಪ ಕೆಲಸ ಮಾಡಿ ಅವರ ಕುಟುಂಬವನ್ನು ಸಲುಹುತ್ತಿದ್ದರು. ಆದರೆ, ಈಗ ಪ್ರತಿನಿತ್ಯ ಆಹಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಹುಸೇನ್ ಮೊದಲು ಮದುವೆಯಾಗಿದ್ದು ಅರ್ವಾಲ್ ಜಿಲ್ಲೆಯ ಕುರ್ತಾ ಗ್ರಾಮದಲ್ಲಿ ನಂತರ ಗಯಾ ಜಿಲ್ಲೆಯಲ್ಲಿ 2ನೇ ಮದುವೆ ಹಾಗೂ ಬಿಹಾರದ ಔರಂಗಾಬಾದ್ ಜಿಲ್ಲೆಯ ಖುದ್ವಾದಲ್ಲಿ 3ನೇ ವಿವಾಹವಾಗಿದ್ದಾರೆ. ಇವರಿಗೀಗ 12 ಮಕ್ಕಳಿದ್ದು, ಎಲ್ಲರೂ ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ.
ಜಿಲ್ಲಾಡಳಿತ ಇವರ ಕುಟುಂಬಕ್ಕೆ ನಿಯಮಿತವಾಗಿ ಪಡಿತರ ನೀಡುತ್ತಿದೆ. ಆದರೆ, ಹೆಚ್ಚಿನ ಸಂಖ್ಯೆಯ ಸದಸ್ಯರು ಇರುವ ಕಾರಣದಿಂದಾಗಿ ಅವರಿಗೆ ಒದಗಿಸಲಾದ ಪಡಿತರವು ಯಾವುದಕ್ಕೂ ಸಾಲದಂತಾಗಿದೆ.