ತಿರುವನಂತಪುರಂ: ಈಗಾಗಲೇ ಹಲವಾರು ಸಮಸ್ಯೆಗಳ ಸುಳಿಯಲ್ಲಿದ್ದ ಕೇರಳ ಗೋಡಂಬಿ ಉದ್ಯಮ ಲಾಕ್ಡೌನ್ನಿಂದಾಗಿ ಸಂಪೂರ್ಣ ಕುಸಿಯುವ ಹಾದಿಯತ್ತ ಸಾಗಿದೆ. ಕೇಂದ್ರ ಸರ್ಕಾರ ತಕ್ಷಣ ಸಹಾಯ ಮಾಡಲು ಮುಂದಾಗಬೇಕೆಂದು ಉದ್ಯಮ ಒಕ್ಕೊರಲಿನಿಂದ ಆಗ್ರಹಿಸಿದೆ.
ಈ ಕುರಿತು ಗೋಡಂಬಿ ಉದ್ಯಮ ಸಂರಕ್ಷಣಾ ಮಂಡಳಿಯು (Cashew Industry Protection Council-CIPC) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ಅಮೆರಿಕ, ಜಪಾನ್ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಗೋಡಂಬಿ ರಫ್ತಿಗೆ ಅನುಮತಿ ನೀಡಬೇಕೆಂದು ಕೇಳಿಕೊಂಡಿದೆ.
"ಗೋಡಂಬಿ ರಫ್ತಿನ ಮೇಲೆ ಹೇರಲಾಗಿರುವ ರಫ್ತು ನಿಷೇಧ ನಿರ್ಧಾರದ ಬಗ್ಗೆ ತಕ್ಷಣ ಮರುಪರಿಶೀಲನೆ ಮಾಡಿ. ಈ ಸಮಯದಲ್ಲಿ ಗೋಡಂಬಿ ರಫ್ತಾಗದಿದ್ದರೆ ನಮ್ಮ ಮಾರುಕಟ್ಟೆಗಳನ್ನು ಚೀನಾ, ವಿಯೆಟ್ನಾಂ ಮುಂತಾದ ದೇಶಗಳು ಆಕ್ರಮಿಸಿಕೊಳ್ಳಲಿವೆ. ಆಫ್ರಿಕಾ ದೇಶಗಳಾದ ಐವರಿ ಕೋಸ್ಟ್ ಹಾಗೂ ಘಾನಾಗಳಿಂದ ಬರುವ ಕಚ್ಚಾ ಗೋಡಂಬಿ ಬೀಜದ ಮೇಲೆ ಕೇರಳ ಗೋಡಂಬಿ ಉದ್ಯಮ ಅವಲಂಬಿತವಾಗಿದೆ. ಲಾಕ್ಡೌನ್ನಿಂದಾಗಿ ಆಮದು ನಿಂತುಹೋಗಿವೆ. ಖರೀದಿಗಾಗಿ ಈಗಾಗಲೇ ಬಂಡವಾಳ ಹೂಡಲಾಗಿದ್ದು, ತಕ್ಷಣ ಆಮದು ಆರಂಭವಾಗದಿದ್ದಲ್ಲಿ ಇಡೀ ಉದ್ಯಮ ನೆಲ ಕಚ್ಚಲಿದೆ." ಎಂದು ಸಿಐಪಿಸಿ ಪತ್ರದಲ್ಲಿ ತಿಳಿಸಿದೆ.
ವಿವಿಧ ಕಾರಣಗಳಿಂದ ಕಳೆದ ನಾಲ್ಕಾರು ವರ್ಷಗಳಿಂದ ಕೇರಳ ಗೋಡಂಬಿ ಉದ್ಯಮ ನಷ್ಟದಲ್ಲಿದ್ದು, ಬ್ಯಾಂಕ್ಗಳಿಂದ ಪಡೆದ ಸಾಲ ತೀರಿಸಲಾಗುತ್ತಿಲ್ಲ. ಸಾಲದ ಕಂತು ಕಟ್ಟುವ ಅವಧಿಯನ್ನು ಒಂದು ವರ್ಷ ಅವಧಿಗೆ ಮುಂದೂಡಬೇಕೆಂದು ಸಿಐಪಿಸಿ ಪ್ರಧಾನಿಗೆ ಮನವಿ ಮಾಡಿದೆ.