ನವದೆಹಲಿ: ಕೊರೊನಾದಿಂದಾಗಿ ಬ್ಯಾಂಕಿಂಗ್ ವಲಯದಲ್ಲಿ ಏರುಪೇರು ಉಂಟಾಗಿತ್ತು. ಅಲ್ಲದೆ ಲಾಕ್ಡೌನ್ ವೇಳೆಯಲ್ಲಿ ಬ್ಯಾಂಕ್ಗಳು ಸಾಲ ಹಾಗೂ ಬಡ್ಡಿ, ಇಎಂಐ ಕಂತುಗಳ ಮರುಪಾವತಿಗೆ ಕಾಲಾವಕಾಶ ನೀಡಿ ಗ್ರಾಹಕರ ಹೊರೆ ತಪ್ಪಿಸಿದ್ದವು.
ಈ ನಡುವೆ ಮೊರೊಟೋರಿಯಂ ಅವಧಿಯ ನಂತರದ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್ಬಿಐ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಆಗಸ್ಟ್ 31 2020ರ ನಂತರ ಸಾಲ ಮರುಪಾವತಿಯ ಮೇಲಿನ ಬಡ್ಡಿಯನ್ನು ತಡೆಹಿಡಿಯಲಾಗುವುದಿಲ್ಲ ಎಂದು ಮಾಹಿತಿ ನೀಡಿದೆ. ಈ ಅವಧಿಯನ್ನು ಮತ್ತೆ ವಿಸ್ತರಿಸುವುದರಿಂದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದೆ.
ಇದಲ್ಲದೆ ಸಾಲದ ಬಡ್ಡಿಯನ್ನು ತಾತ್ಕಾಲಿಕವಾಗಿ ಮುಂದೂಡುವುದು ಸಾಲಗಾರರ ಹಿತದೃಷ್ಟಿಯಿಂದಲೂ ಉತ್ತಮವಲ್ಲ. ಇದರಿಂದಾಗಿ ಸಾಲಗಾರನಲ್ಲಿ ಹಣದ ಕೊರತೆಯನ್ನು ನೀಗಿಸುವಲ್ಲಿ ಪರಿಹಾರ ಕ್ರಮವೂ ಅಲ್ಲ. ವಾಸ್ತವವಾಗಿ ಇದು ಸಾಲಗಾರನ ಮರುಪಾವತಿಯ ಉತ್ತಡವನ್ನು ಹೆಚ್ಚಿಸಲಿದೆ. ಆದ್ದರಿಂದ ಸಾಲಗಾರರ ಸಾಲದ ಹೊರೆಯನ್ನು ಸಮತೋಲನಗೊಳಿಸಲು ದೀರ್ಘಾವಧಿಯ ಪರಿಹಾರ ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಇದೀಗ ಮೊರೊಟೋರಿಯಂ ಅವಧಿಯ ನಂತರದ ಸಾಲ ಮರುಪಾವತಿ ಮೇಲಿನ ಬಡ್ಡಿ ದರ ಮನ್ನಾ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಕೆಯಾಗಿತ್ತು. ಅಲ್ಲದೆ ಈಗಾಗಲೇ ಬಡ್ಡಿ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ಒಪ್ಪಿಕೊಂಡಿರುವುದಲ್ಲದೆ ಆರ್ಥಿಕ ಹೊರ ಹೊರುವುದಾಗಿಯೂ ತಿಳಿಸಿದೆ.