ಧರ್ಮಪುರಿ : ರಾಜರ ಕಾಲದಲ್ಲೆಲ್ಲ ಜಾನಪದ, ಪೌರಾಣಿಕ ಕಲಾ ಪ್ರದರ್ಶನವೇ ಮುಖ್ಯ ಮನೋರಂಜನೆಯ ಮಾಧ್ಯಮವಾಗಿತ್ತು. ಕಲಾ ಪ್ರದರ್ಶನ ಮಾಡುತ್ತಿದ್ದವರಿಗೆ ರಾಜ, ರಾಣಿಯರು ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಜಾನಪದ ಕಲಾ ಪ್ರಕಾರಗಳಿಗೆ ಸಿಗುತ್ತಿರುವ ಬೆಂಬಲ ಕಡಿಮೆಯಾಗಿದೆ. ಹೀಗಾಗಿ, ಕಲಾವಿದರು ಎಲ್ಲೋ ಅಲ್ಪ ಸ್ವಲ್ಪ ಸಿಗುವ ಅವಕಾಶಗಳನ್ನು ಬಳಸಿಕೊಂಡು ತಮ್ಮ ಜೀವನೋಪಾಯ ಕಂಡು ಕೊಂಡಿದ್ದಾರೆ. ಆದರೆ, ಕೊರೊನಾ ಲಾಕ್ ಡೌನ್ ಈ ಕಲಾವಿದರ ಬದುಕನ್ನೇ ಕಸಿದುಕೊಂಡಿದ್ದು, ನಮಗೆ ಸಹಾಯ ಮಾಡುವ ಮೂಲಕ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ರಕ್ಷಿಸಬೇಕು ಎಂದು ಕಲಾವಿದರು ಸರ್ಕಾರಕ್ಕೆ ಮೊರೆಯಿಡುತ್ತಿದ್ದಾರೆ.
ಗ್ರಾಮೀಣ ಹಬ್ಬಗಳು ಸಾಂಪ್ರದಾಯಿಕ, ಜಾನಪದ ಕಲಾ ಪ್ರದರ್ಶನಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ನಮ್ಮ ದೇಶದಲ್ಲಿ ಮೈಲಿಗೊಂದು ಜಾನಪದ ಕಲಾ ಸಂಸ್ಕೃತಿಯಿದೆ. ಅಂತಹ ಕಲಾಪ್ರಕಾರಗಳಲ್ಲಿ ತಮಿಳುನಾಡಿನ 'ಥೆರು ಕೂತು' ಕೂಡ ಒಂದು. ಇದು ದೇವತೆಗಳು, ರಾಕ್ಷಸ ಪಾತ್ರಗಳನ್ನೊಳಗೊಂಡ ಮಹಾಭಾರತ, ರಾಮಾಯಣದ ಕಥೆಗಳ ತಮಿಳು ದೇಶದ ಪೌರಾಣಿಕ ನಾಟಕ ಪ್ರಕಾರವಾಗಿದೆ. ಇದು ಕೇವಲ ಕಲೆ ಮಾತ್ರವಲ್ಲ, ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಜನರನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇತ್ತೀಚೆಗೆ ಆಧುನಿಕತೆಯ ಭರಾಟೆಯಲ್ಲಿ ಇತರ ಸಾಂಪ್ರದಾಯಿಕ ಕಲೆಗಳಂತೆ ಈ ಕಲಾ ಪ್ರಕಾರಕ್ಕೂ ಬೆಂಬಲ ಕಡಿಮೆಯಾಗುತ್ತಿದೆ. ವರ್ಷಕ್ಕೊಂದು ಸಲ ನಗರ ಪ್ರದೇಶಗಳಲ್ಲಿ ನಡೆಯುವ ಕೆಲ ಪ್ರದರ್ಶನಗಳು ಮತ್ತು ಗ್ರಾಮೀಣ ಭಾಗದ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಈ ಕಲಾವಿದರಿಗೆ ಅವಕಾಶಗಳು ಸಿಗುತ್ತವೆ. ಪ್ರಮುಖವಾಗಿ 'ಥೆರು ಕೂತು' ಕಲಾವಿದರಿಗೆ ನವೆಂಬರ್ನಿಂದ ಮೇ ಅವಕಾಶಗಳು ಒದಗಿ ಬರುವ ಸೀಸನ್. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಲಾಕ್ ಡೌನ್ ಆಗಿ, ಈ ಕಲಾವಿದರಿಗೆ ಸಿಗುತ್ತಿದ್ದ ಅಲ್ಪ ಸ್ವಲ್ಪ ಅವಕಾಶಗಳು ಇಲ್ಲದಾಗಿವೆ.
ಧರ್ಮಪುರಿ ಜಿಲ್ಲೆಯೊಂದರಲ್ಲೇ ತಲಾ 5 ಸಾವಿರದ ಸದಸ್ಯರಿರುವ 50 ಕ್ಕೂ ಹೆಚ್ಚು ಕಲಾವಿದರ ಗುಂಪುಗಳಿವೆ. ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲೂ ಈ ರೀತಿಯ ಜಾನಪದ ಸಾಂಸ್ಕೃತಿಕ ಗುಂಪುಗಳಿವೆ. ಒಂದು ತಂಡ ಹಗಲು ರಾತ್ರಿ ಪ್ರದರ್ಶನ ನೀಡಿದರೆ 400 ರಿಂದ 600 ರೂ. ಸಂಭಾವನೆ ನೀಡುತ್ತಾರೆ. ಇದೇ ಈ ಕಲಾವಿದರ ಜೀವನೋಪಾಯಕ್ಕೆ ದಾರಿಯಾಗಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಇತರ ವರ್ಗಗಳಂತೆ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಸರ್ಕಾರ 1 ಸಾವಿರ ರೂ ಸಹಾಯಧನ ಘೋಷಿಸಿದೆ. ಆದರೆ ಈ ಹಣ ಕಲಾವಿದರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ದೊರೆತಿದೆ. ಇನ್ನುಳಿದವರು ಧನ ಸಹಾಯ ಸಿಗದೆ ಪರದಾಡುತ್ತಿದ್ದಾರೆ. ಇನ್ನು, ಲಾಕ್ ಡೌನ್ ಮುಕ್ತಾಯವಾದರೂ ಈ ಕಲಾವಿದರಿಗೆ ಅವಕಾಶಗಳು ಸಿಗುತ್ತವೆ ಎನ್ನುವ ನಂಬಿಕೆಯಿಲ್ಲ. ಹೀಗಾಗಿ ಸರ್ಕಾರ ಎಲ್ಲಾ ಸಾಂಪ್ರದಾಯಿಕ, ಜಾನಪದ ಕಲಾವಿದರ ನೆರವಿಗೆ ಬಂದು, ಅವರ ಜೀವನೊಪಾಯಕ್ಕೆ ಶಾಶ್ವತ ದಾರಿ ಮಾಡಿಕೊಡಬೇಕು ಜೊತೆಗೆ ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸಬೇಕು ಎಂದು ಕಲಾವಿದರು ಆಗ್ರಹಿಸಿದ್ದಾರೆ.