ಹವಾಮಾನ ಬದಲಾವಣೆಯ ಪರಿಣಾಮ ಪ್ರಪಂಚವನ್ನು ವಿನಾಶಗೊಳಿಸುತ್ತಿರುವ ಈ ಸಂದರ್ಭದಲ್ಲಿ ತುರ್ತಾಗಿ ಪರಿಸರ ಸಂರಕ್ಷಣಾ ಕ್ರಮಗಳನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ.
ಪರಿಸರ ಬಿಕ್ಕಟ್ಟು ಹಲವಾರು ರಾಷ್ಟ್ರಗಳ ಆರ್ಥಿಕತೆಯನ್ನು ಧ್ವಂಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಈ ವರ್ಷದ ಕೇಂದ್ರ ಬಜೆಟ್ 2020 ರಲ್ಲಿ 4,400 ಕೋಟಿ ರೂಪಾಯಿಯನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಟ್ಟಿದೆ. ಇದರೊಂದಿಗೆ ಪ್ಯಾರಿಸ್ ಒಪ್ಪಂದದ ಅನುಷ್ಟಾನಕ್ಕೆ ತನ್ನನ್ನು ಸಜ್ಜುಗೊಳಿಸಿದೆ. ಪ್ರಸಕ್ತ ಬಜೆಟ್ ವಾಯುಮಾಲಿನ್ಯ ಹೆಚ್ವಾಗಿರುವ ನಗರಗಳಿಗೆ ಹೆಚ್ಚಿನ ಗಮನ ಹರಿಸಿದ್ದು ಅಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವುದಲ್ಲದೆ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕಾರ್ಯಯೋಜನೆ ಮಾಡಿರುವುದು ಗಮನಾರ್ಹ ಸಂಗತಿ.
ಭಾರತದ ಉತ್ತರ ಮತ್ತು ದಕ್ಷಿಣದ ರಾಜ್ಯಗಳಲ್ಲಿನ ಗಾಳಿಯ ಗುಣಮಟ್ಟದ ಸೂಚ್ಯಂಕವು ವಾಯುಮಾಲಿನ್ಯ ಎಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸುತ್ತದೆ. ಚಳಿಗಾಲದ ಆರಂಭದೊಂದಿಗೆ, ವಾಯು ಮಾಲಿನ್ಯದ ಜೊತೆಗೂಡಿದ ಹೊಗೆ ಭಾರತೀಯ ನಗರಗಳನ್ನು ಉಸಿರುಗಟ್ಟಿಸುತ್ತಿದೆ. ಈ ತೀವ್ರ ಸಮಸ್ಯೆಯ ಹಿನ್ನೆಲೆಯಲ್ಲಿ, ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತರುವ ಮೂಲಕ ವಾಯುಮಾಲಿನ್ಯವನ್ನು ತಡೆಗಟ್ಟಲು ಮತ್ತು ಜನರಿಗೆ ಗುಣಮಟ್ಟದ ಗಾಳಿಯನ್ನು ಒದಗಿಸುವ ಉದ್ದೇಶವನ್ನು ಕೇಂದ್ರ ಹೊಂದಿದೆ.
ಇದು ಪರಿಸರ ಸಂರಕ್ಷಣೆಯ ಪ್ರಮುಖ ಹೆಜ್ಜೆ. ಇದಕ್ಕಾಗಿ ಕೇಂದ್ರವು ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಪರಿಚಯಿಸಲು ಕ್ರಮ ತೆಗೆದುಕೊಳ್ಳುತ್ತಿರುವುದು ಶ್ಲಾಘನೀಯ. ಈ ಜವಾಬ್ದಾರಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ವಹಿಸಲಾಗಿದೆ. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪರಿಚಯಿಸುವ ಸಲುವಾಗಿ ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ರೂ. 460 ಕೋಟಿಗಳನ್ನು ಈ ಸಚಿವಾಲಯಗಳಿಗೆ ವಿಶೇಷವಾಗಿ ಹಂಚಿಕೆ ಮಾಡಲಾಗಿದೆ.
ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ ನಡೆಸುವ ಯೋಜನೆಗಳಿಗೆ ಆ ಆಯವ್ಯಯದಲ್ಲಿ ನೀಡಿದ ಹಣವನ್ನು ಬಳಸಲಾಗುತ್ತದೆ. ರಾಷ್ಟ್ರೀಯ ಹಸಿರು ನಿಯೋಗಕ್ಕೆ ರೂ. 311 ಕೋಟಿ ಯನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಇದರ ಭಾಗವಾಗಿ ರಾಷ್ಟ್ರದ್ಯಂತ ಕಾಡುಗಳ ಅಭಿವೃದ್ಧಿಗಾಗಿ ರೂ. 246 ಕೋಟಿ ಯನ್ನು ಮೀಸಲಿಟ್ಟಿದೆ. ಕ್ಷಿಪ್ರವಾಗಿ ಸಾಗುತ್ತಿರುವ ನಗರೀಕರಣ, ಕೈಗಾರಿಕೀಕರಣ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಘರ್ಷಣೆಗಳಿಂದಾಗಿ ಅರಣ್ಯ ವ್ಯಾಪ್ತಿ ಕುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರೂ.50 ಕೋಟಿಯನ್ನು ಹಂಚಿಕೆ ಮಾಡಲಾಗಿದೆ.
ಗ್ರೀನ್‌ಪೀಸ್ ದಕ್ಷಿಣ ಏಷ್ಯಾದ ಇತ್ತೀಚಿನ ಅಧ್ಯಯನದ ಪ್ರಕಾರ, ವಾಯುಮಾಲಿನ್ಯ ಒಂದರಿಂದಾಗಿಯೇ ಭಾರತದಲ್ಲಿ ವಾರ್ಷಿಕವಾಗಿ 10 ಲಕ್ಷಕ್ಕೂ ಹೆಚ್ಚು ಜೀವಗಳು ಸಾಯುತ್ತಿವೆ. ವಾತಾವರಣದಲ್ಲಿ ಪುನರ್ಬಳಕೆಯಾಗದ ಇಂಧನಗಳ (fossil fuels) ಪರಿಣಾಮದಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ 9.80 ಲಕ್ಷ ಅಕಾಲಿಕ ಶಿಶುಗಳು ಜನಿಸುತ್ತವೆ ಎಂದು ಅದೇ ಅಧ್ಯಯನದಿಂದ ತಿಳಿದುಬಂದಿದೆ.
ಇಂಗಾಲದ ಹೊರಸೂಸುವಿಕೆಯಿಂದ ಉಂಟಾಗುವ ವಾಯುಮಾಲಿನ್ಯಕ್ಕೆ ಹೆಚ್ಚು ಗುರಿಯಾಗುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಈ ಅಂಕಿ-ಅಂಶಗಳು ಪ್ರಸಕ್ತ ಪರಿಸ್ಥಿತಿ ಎಷ್ಟು ಆತಂಕಕಾರಿ ಹಾಗೂ ನಿರಾಶಾದಾಯಕವಾಗಿದೆ ಎಂಬುದನ್ನು ತಿಳಿಸುತ್ತದೆ. ಮಾಲಿನ್ಯದಿಂದ ಉಂಟಾಗುವ ವಾರ್ಷಿಕ ನಷ್ಟವು ಒಟ್ಟು ಜಿಡಿಪಿಯ ಶೇಕಡಾ 5.4 ಕ್ಕೆ ಸಮಾನಾಗಿದೆ. ದೇಶದೊಳಗಿನ 8 ಸಾವುಗಳಲ್ಲಿ 1 ಸಾವಿಗೆ ವಾಯುಮಾಲಿನ್ಯ ಕಾರಣ ಎಂದು ತಿಳಿದುಬಂದಿದೆ. ಹವಾಮಾನ ಬದಲಾವಣೆ ಮತ್ತು ಪರಿಸರ ಬಿಕ್ಕಟ್ಟು ಕನಿಷ್ಠ ಆಸಕ್ತಿಯ ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳದ ವಿಚಾರ ಎಂಬುದು ಪ್ರಸ್ತುತ ಮತ್ತು ಹಿಂದಿನ ಸರ್ಕಾರಗಳು ಅಳವಡಿಸಿಕೊಂಡ ನೀತಿಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.
ವ್ಯಾಪಾರ, ವಾಣಿಜ್ಯ ಮತ್ತು ರಾಜಕೀಯ ಸಂಸ್ಥೆಗಳು ತೋರಿಸುತ್ತಿರುವ ಪರಿಸರ ಕಾಳಜಿ ನಗಣ್ಯ. ಪರಿಸರ ಸಂರಕ್ಷಣೆಗೆ ಅಲ್ಪ ಪ್ರಮಾಣದ ಬಜೆಟ್ ಹಂಚಿಕೆ ಕೂಡ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಒಂದು ಕಾರಣ ಎಂಬ ಟೀಕೆಯೂ ಇದೆ.
ಪ್ರಸ್ತುತ, ಭಾರತದಲ್ಲಿನ ಹವಾಮಾನ ಬದಲಾವಣೆಯು ಎಲ್ಲಾ ವರ್ಗದ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬಿರುಗಾಳಿ ಸಹಿತ ಗುಡುಗು ಮಳೆ, ಪ್ರವಾಹ, ಕ್ಷಾಮ, ಅನಿಯಮಿತ ಋತುಮಾನಗಳು ಮತ್ತು ಹೆಚ್ಚಿನ ತಾಪಮಾನ ಇವಿಷ್ಟೇ ಪುರಾವೆಗಳು ಹವಾಮಾನ ವೈಪರಿತ್ಯವನ್ನು ಸಶಾಬೀತು ಪಡಿಸಲು ಸಾಕು. ಸುಸ್ಥಿರತೆಯನ್ನು ಸಾಧಿಸಲು ಮತ್ತು ಜನರ ಜೀವನ ಮಟ್ಟವನ್ನು ಸುಧಾರಿಸಲು, ಇಂಗಾಲದ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಇಂದಿನ ಅಗತ್ಯವಾಗಿದೆ.
ಹವಾಮಾನ ವೈಪರೀತ್ಯದ ಕುರಿತ ಪ್ಯಾರಿಸ್ ಒಪ್ಪಂದ ಜಾರಿಗೆ ಭಾರತ ಸರ್ಕಾರ ಯೋಜನಾಬದ್ಧವಾಗಿ ಮುಂದುವರಿಯುತ್ತಿದೆ. ಇದರನ್ವಯ ಈಗಾಗಲೇ ಸರ್ಕಾರವು 2021 ರ ಜನವರಿ 1 ರೊಳಗೆ ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ. ಇದರ ಭಾಗವಾಗಿ, ಇಂಗಾಲದ ನಿಯಮಗಳ ಪ್ರಸ್ತುತ ಮಾನದಂಡಗಳಿಗೆ ಅನುಗುಣವಾಗಿ ನಡೆಯುತ್ತಿರದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೃಷಿ ಕ್ಷೇತ್ರದಲ್ಲಿ ಪಳೆಯುಳಿಕೆ ಇಂಧನಗಳ ಬದಲಿಗೆ ಪರ್ಯಾಯ ಇಂಧನ ಮೂಲಗಳ ಬಳಕೆಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಕುಸುಮ್ ಯೋಜನೆ ರಾಷ್ಟ್ರದ್ಯಂತ ಜಾರಿಗೆ ತರಲು ನಿರ್ಧರಿಸಲಾಗಿದೆ.
ಕೃಷಿಕ್ಷೇತ್ರದಲ್ಲಿ ಶೇಕಡ 70ರಷ್ಟು ಜನರು ಉದ್ಯೋಗ ನಿರತರಾಗಿರುವುದರಿಂದ ಈ ಕ್ರಮ ಪರಿಸರ ಸಂರಕ್ಷಣೆಗೆ ಅನುಕೂಲಕರವಾಗಲಿದೆ. ದೇಶಾದ್ಯಂತ 35 ಲಕ್ಷ ಸೌರ ಪಂಪ್ ಸೆಟ್‌ಗಳನ್ನು ಸ್ಥಾಪಿಸಲು ರೈತರು ಮುಂದಾಗಿದ್ದು, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೂ ಬಳಕೆಯಾಗದ ಮತ್ತು ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಮತ್ತು ಉತ್ಪಾದಿಸಿದ ಸೌರಶಕ್ತಿಯನ್ನು ಸಾಮಾನ್ಯ ವಿದ್ಯುತ್ ಗ್ರಿಡ್‌ಗೆ ಪೂರೈಸಲು ರೈತರನ್ನು ಪ್ರೋತ್ಸಾಹಿಸಿದರೆ, ಇಂಗಾಲದ ಹೊರಸೂಸುವಿಕೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದಾಗಿದೆ.
ನಿರಂತರವಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಗ್ರಹಿಸಲು, ನೀತಿ ಆಯೋಗ ರೂಪಿಸಿರುವ ಸಮಗ್ರ ಯೋಜನೆಯನ್ನು ತಕ್ಷಣವೇ ಕಾರ್ಯಗತಗೊಳಿಸ ಬೇಕಾದ ಅಗತ್ಯವಿದೆ. ವಾಯು ಗುಣಮಟ್ಟದ ಸೂಚ್ಯಂಕ ಅಧ್ಯಯನಕ್ಕಾಗಿ 180 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು ಅವುಗಳಲ್ಲಿ ಭಾರತ ಕೊನೆಯ ಸ್ಥಾನ ಪಡೆದಿದೆ ಎಂಬುದು ಕಳವಳಕಾರಿ ಅಂಶವಾಗಿದೆ.
ಮತ್ತೊಂದು ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ, ವಿಶ್ವದ 20 ಅತ್ಯಂತ ಹೆಚ್ಚು ಕಲುಷಿತ ನಗರಗಳಲ್ಲಿ 15 ನಗರಗಳು ಭಾರತದಲ್ಲಿವೆ. ವಾಹನಗಳು ಮತ್ತು ಕೈಗಾರಿಕೆಗಳು ಹೊರಸೂಸುವ ಇಂಧನವು ಆಸ್ತಮಾ ಮತ್ತು ಇತರ ಹಲವಾರು ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಪ್ರತಿವರ್ಷ 3.5 ಲಕ್ಷ ಮಕ್ಕಳು ಆಸ್ತಮಾದಿಂದ ಬಳಲುತ್ತಿದ್ದರೆ, ವಯಸ್ಕರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಕಾಯಿಲೆ ಹೆಚ್ಚುಗಾತ್ತಿದೆ.
ಈ ಎಲ್ಲಾ ಅಪಾಯಗಳಿಗೆ ವಾಯುಮಾಲಿನ್ಯ ಮುಖ್ಯ ಕಾರಣ ಎಂದು ಗುರುತಿಸಲಾಗಿದೆ. ಕಳೆದ ಅರ್ಧ ಶತಮಾನದಿಂದ ಹೆಚ್ಚುತ್ತಿರುವ ಜಾಗತಿಕ ತಾಪಮಾನವು ರಾಷ್ಟ್ರಗಳ ನಡುವೆ ಅಸಮಾನತೆಗೆ ಕಾರಣವಾಗಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಹೆಚ್ಚು ಶ್ರೀಮಂತವಾಗುತ್ತಿದ್ದರೆ , ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ರಾಷ್ಟ್ರಗಳು ಬಡತನದತ್ತ ಸಾಗುತ್ತಿವೆ. ಇಂಗಾಲದ ಹೊರಸೂಸುವಿಕೆ, ವಾಯುಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಜಗತ್ತನ್ನು ಪರಿಸರ ಬಿಕ್ಕಟ್ಟಿನತ್ತ ತಳ್ಳುತ್ತಿದೆ. ಬ್ರಿಟನ್, ನ್ಯೂಜಿಲೆಂಡ್ ಮತ್ತು ಕೆನಡಾ ದೇಶಗಳು ಹವಾಮಾನ ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ. ಇದರೊಂದಿಗೆ ಈ ಮೂರು ದೇಶಗಳು ತಲಾ 53, 49 ಮತ್ತು 32 ಪ್ರತಿಶತದಷ್ಟು ವಸತಿ ಪ್ರದೇಶಗಳನ್ನು ವಾಯುಮಾಲಿನ್ಯದಿಂದಾಗಿ ವಾಸಯೋಗ್ಯವಾಗಿಲ್ಲ ಎಂದು ಪರಿಗಣಿಸಿವೆ.
ವಾಯುಮಾಲಿನ್ಯವನ್ನು ಪತ್ತೆಹಚ್ಚುವಲ್ಲಿ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಿಶ್ವವು ಈ ಮೂರು ರಾಷ್ತ್ರ ಗಳು ಅನುಸರಿಸಿದ ಕ್ರಮಗಳನ್ನು ಅನುಸರಿಸಬೇಕಾಗಿದೆ ಹಾಗೂ ಈ ಮೂರು ರಾಷ್ಟ್ರಗಳು ಕೈಗೊಂಡ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ. ವಾಹನ ಉತ್ಪಾದನಾ ವಲಯದಲ್ಲಿ ಪುನರ್ ಬಳಕೆಗೆ ಯೋಗ್ಯ ವಲ್ಲದ ಇಂಧನಗಳ ಬಳಕೆಯನ್ನು ನಿಯಂತ್ರಿಸಲು, ವಿದ್ಯುತ್ ಮತ್ತು ಸೌರ ವಾಹನ ಉ್ಪತ್ಪಾದನಾ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಪ್ರೋತ್ಸಾಹ ಮತ್ತು ಸಹಾಯಧನವನ್ನು ನೀಡಬೇಕಾಗಿದೆ.
ವಾಯುಮಾಲಿನ್ಯದ ಅಪಾಯವನ್ನು ತಡೆಗಟ್ಟಲು ಬಹು ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಶಾಂಘೈ, ಬರ್ಲಿನ್, ಲಂಡನ್, ಪ್ಯಾರಿಸ್, ಮ್ಯಾಡ್ರಿಡ್ ಮತ್ತು ಸಿಯೋಲ್‌ನಂತಹ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪ್ರಯತ್ನವನ್ನು ವಿಶ್ವಾದ್ಯಂತ ತಜ್ಞರು ಶ್ಲಾಘಿಸುತ್ತಿದ್ದಾರೆ. ಈ ನಗರಗಳು ಕೈಗೊಂಡ ಕ್ರಮಗಳನ್ನು ಭಾರತ ಅನುಸರಿಸಬೇಕು. ಇದು ಸಾಕಾರಗೊಳ್ಳಬೇಕಾದರೆ ನಾಗರಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಕ್ಷಿಪ್ರವಾಗಿ ವಿನಾಶವಾಗುತ್ತಿರುವ ಅರಣ್ಯಗಳನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಪರಿಸರ ಸಂರಕ್ಷಣೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸಬೇಕು. ಹೆಚ್ಚುವರಿ ಇಂಗಾಲದ ಹೊರಸೂಸುವಿಕೆಯನ್ನು ಮೊಟಕುಗೊಳಿಸದಿದ್ದರೆ, ಜೀವರಾಶಿಗಳ ಐದನೇ ಒಂದು ಭಾಗವು ಅಳಿವಿನಂಚಿಗೆ ಸೇರುವ ಅಪಾಯವಿದೆ.
ನಾವು ಭೂಮಿಯಲ್ಲಿ ವಾಸಿಸುವ ಕೊನೆಯ ಪೀಳಿಗೆಯವರಾಗಿರಬಹುದು ಎಂದು ಕೆಲವು ತಜ್ಞರು ಈಗಾಗಲೇ ಅಭಿಪ್ರಾಯಪಟ್ಟಿರುವುದು ಆತಂಕಕಾರಿ. ಆದ್ದರಿಂದ, ಜೀವ ಸಂಕುಲ ವಿನಾಶವಾಗದಂತೆ ತಡೆಯಲು ಪ್ರಕೃತಿ ಮತ್ತು ಪರಿಸರದ ರಕ್ಷಣೆ ಮಾಡುವುದು ನಾಗರೀಕರ ಮತ್ತು ಆಡಳಿತಗಾರ ಆದ್ಯತೆಯಾಗಬೇಕು. ಆಗ ಮಾತ್ರ ಕಲುಷಿತ ಭಾರತವನ್ನು ಹಸಿರು ಭಾರತವನ್ನಾಗಿ ಪರಿವರ್ತಿಸುವ ಕನಸನ್ನು ನನಸಾಗಿಸಬಹುದು.