ಕಿನ್ನೌರ್ (ಹಿಮಾಚಲಪ್ರದೇಶ) : ಭಾರತದ ಕಟ್ಟಕಡೆಯ ಗ್ರಾಮವಾದ ಚರಂಗ್ ಗ್ರಾಮಕ್ಕೆ ಕಡೆಗೂ ಅಂತರ್ಜಾಲ ಸಂಪರ್ಕ ದೊರಕಿದೆ.
ಕಿನ್ನೌರ್ ಬುಡಕಟ್ಟು ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳು ಟಿಬೆಟ್ ಹಾಗೂ ಹಿಮಾಚಲದ ಗಡಿಯಲ್ಲಿವೆ. ಹಿಮಾಚಲವು ಚೀನಾದೊಂದಿಗೆ ಸುಮಾರು 250 ಕಿ.ಮೀ ಉದ್ದದ ಅಂತಾರಾಷ್ಟ್ರೀಯ ಗಡಿ ಹೊಂದಿದೆ.
ಚೀನಾದ ಆಕ್ರಮಿತ ಟಿಬೆಟ್ ಗಡಿಯಲ್ಲಿರುವ ಕಿನ್ನೌರ್ ಜಿಲ್ಲೆಯ ಕೊನೆಯ ಗ್ರಾಮವಾದ ಚರಂಗ್ಗೆ ಫೋನ್ ಮತ್ತು ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಈ ಗ್ರಾಮಕ್ಕೆ ಮೊದಲ ಬಾರಿಗೆ ಅಂತರ್ಜಾಲ ಸೌಲಭ್ಯ ದೊರಕಿದೆ. ವೈಫೈ ಸೌಲಭ್ಯ ದೊರೆತ ತಕ್ಷಣ ಇಲ್ಲಿನ ಗ್ರಾಮಸ್ಥರು ಈಗ ಆನ್ಲೈನ್ನಲ್ಲಿ ಬ್ಯುಸಿಯಾಗಿದ್ದಾರೆ.
ನೆಟ್ವರ್ಕ್ ಸೌಲಭ್ಯ ದೊರಕಿದ್ದರಿಂದಾಗಿ ಶಿಕ್ಷಣ ಕ್ಷೇತ್ರ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳ ಕೆಲಸ ಸುಲಭವಾಗಿದೆ. ಕೊರೊನಾ ನಂತರ ಶಾಲಾ-ಕಾಲೇಜು ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಗಡಿ ಪ್ರದೇಶಗಳಲ್ಲಿ ಅಂತರ್ಜಾಲ ಸೌಲಭ್ಯದ ಕೊರತೆಯಿಂದಾಗಿ, ಇಲ್ಲಿನ ಶಾಲಾ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು.
ಆದರೆ, ಈಗ ಜಿಲ್ಲೆಯ ಕೊನೆಯ ಗ್ರಾಮ ಪಂಚಾಯತ್ ಚರಂಗ್ ಕೂಡ ವೈಫೈ ಸೌಲಭ್ಯದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಈ ಪ್ರದೇಶದ ಜನರನ್ನು ಮುನ್ನೆಲೆಗೆ ಬರುವಂತೆ ಮಾಡಿದೆ. ಈ ಮೂಲಕ ಇಲ್ಲಿನ ಜನರ ಬಹುದಿನಗಳ ಕನಸು ನನಸಾಗಿದೆ.