ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನೆಯ ಕಾರ್ಯಾಚರಣೆ ಮುಂದುವರೆದಿದೆ. ಉಗ್ರರ ನೆಲೆಗಳ ಮೇಲೆ ಭದ್ರತಾ ಪಡೆಗಳು ನಿರಂತರ ದಾಳಿ ಮುಂದುವರೆಸಿವೆ.
ಶೋಪಿಯಾನದಲ್ಲಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿದ ಭದ್ರತಾ ಪಡೆಗಳು ಅಪಾರ ಪ್ರಮಾಣದ ಮದ್ದುಗುಂಡು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಂಡಿವೆ.
ಶೋಪಿಯಾನ್‌ನಲ್ಲಿ ಉಗ್ರರ ಮೇಲೆ ಹೊಂಚು ದಾಳಿಯನ್ನು ಮಾಡಿ ಮಾರಕಾಸ್ತ್ರಗಳನ್ನ ನಾಶಪಡಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.
ಸ್ಥಳೀಯ ಪೊಲೀಸ್ ಪಡೆಗಳು, 44 ಸೇನಾ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ 178 ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆ ಪತ್ತೆ ಹಚ್ಚಿ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿವೆ.
ದಾಚೋ ಜಿನಾಪುರಾ ಶೋಪಿಯಾನ್ ಉದ್ಯಾನವೊಂದರಲ್ಲಿ ಎಲ್ಇಟಿ ಉಗ್ರರು ಇರುವ ಬಗ್ಗೆಖಚಿತ ಮಾಹಿತಿ ಮೇಲೆ ಭದ್ರತಾ ಪಡೆಗಳು ಈ ದಾಳಿ ನಡೆಸಿದ್ದವು. ಈ ಸಂಬಂಧ ಪೊಲೀಸರು ಜಿನಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.