ಕೋಲ್ಕತಾ : ಕಳೆದ ವಾರ ಲಡಾಖ್‌ನಲ್ಲಿ 20 ಭಾರತೀಯ ಯೋಧರನ್ನು ಚೀನಾ ಸೇನೆ ಹತ್ಯೆಗೈದಿದ್ದನ್ನು ವಿರೋಧಿಸಿ ನಗರದ ಕೆಲ ಜೊಮ್ಯಾಟೊ ಡೆಲಿವರಿ ಬಾಯ್ಸ್, ತಮ್ಮ ಟೀ ಶರ್ಟ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಬೆಹಾಲಾದಲ್ಲಿ ಚೀನಾ ವಿರುದ್ಧ ಈ ವಿನೂತನ ಪ್ರತಿಭಟನೆ ನಡೆದಿದೆ. ಜೊಮ್ಯಾಟೊ ಕಂಪನಿಯಲ್ಲಿ ಚೀನಾ ಹೂಡಿಕೆ ಮಾಡಿರುವುದರಿಂದ ನಾವು ನಮ್ಮ ಕೆಲಸವನ್ನು ತ್ಯಜಿಸಿದ್ದೇವೆ. ಯಾರೂ ಕೂಡ ಈ ಕಂಪನಿಯ ಮೂಲಕ ಆಹಾರ ಆರ್ಡರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
2018 ರಲ್ಲಿ ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾದ ಭಾಗವಾಗಿರುವ ಆಂಟ್ ಫೈನಾನ್ಶಿಯಲ್ ಜೊಮ್ಯಾಟೊದಲ್ಲಿ 210 ಮಿಲಿಯನ್ ಡಾಲರ್ (ಶೇ. 14.7 ರಷ್ಟು) ಹೂಡಿಕೆ ಮಾಡಿದೆ. ಇತ್ತೀಚೆಗೆ ಹೆಚ್ಚುವರಿಯಾಗಿ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
ಚೀನಾದ ಕಂಪನಿಗಳು ನಮ್ಮಿಂದ ಲಾಭ ಪಡೆದು ನಮ್ಮ ದೇಶದ ಸೈನಿಕರ ಮೇಲೆ ದಾಳಿ ನಡೆಸುತ್ತಿವೆ. ಅವರು ನಮ್ಮ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ. ನಾವು ಹಸಿವಿನಿಂದ ಬಳಲುತ್ತಿದ್ದೇವೆ. ಆದರೂ ಚೀನಾ ಹೂಡಿಕೆ ಮಾಡಿರುವ ಕಂಪನಿಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ಇನ್ನೋರ್ವ ಪ್ರತಿಭಟನಾಕಾರ ಹೇಳಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಮೇ ತಿಂಗಳಲ್ಲಿ 520 (ಶೇ.13) ಉದ್ಯೋಗಿಗಳನ್ನು ಜೊಮ್ಯಾಟೊ ಕೆಲಸದಿಂದ ತೆಗೆದು ಹಾಕಿದೆ. ಈ ಕುರಿತು ಜೊಮ್ಯಾಟೊ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.