ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ವೇಳೆ ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತದ ಗಡಿ ಹಂಚಿಕೆ ಮತ್ತು ಆ ಪ್ರದೇಶದ ಭದ್ರತೆಯ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜನಾಥ್ ಸಿಂಗ್ ಮತ್ತು ಎಸ್ಪರ್ ಅವರು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಿದರು. ಅಮರಿಕದ ಕೋರಿಕೆಯ ಮೇರೆಗೆ ದೂರವಾಣಿ ಸಂಭಾಷಣೆ ನಡೆದಿದೆ ಎಂದು ಅವರು ಹೇಳಿದರು.
ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾ ಆಕ್ರಮಣಕಾರಿ ನಡೆಯ ಬಗ್ಗೆಯೂ ಚರ್ಚಿಸಲಾಯಿತು. ಸಿಂಗ್ ಭಾರತದ ನಿಲುವಿನ ಬಗ್ಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿಗೆ ತಿಳಿಸಿದರು.
ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಹಲವು ಬಾರಿ ಮಾತುಕತೆಗಳು ನಡೆದಿವೆ. ಇಂದಿನ ಸಂಭಾಷಣೆಯು ಈ ಮಾಹಿತಿ ವಿನಿಮಯದ ಮುಂದುವರಿದ ಭಾಗವಾಗಿದೆ ಎಂದು ಮೂಲಗಳು ಹೇಳಿವೆ.