ಪಣಜಿ(ಗೋವಾ): ನೆರೆಯ ಕರ್ನಾಟಕ ರಾಜ್ಯವೂ ಮಹದಾಯಿ ನೀರನ್ನು ಬೇರೆಡೆಗೆ ತಿರುಗಿಸಿದ್ದರಿಂದ, ಗೋವಾದಲ್ಲಿ ಮಹದಾಯಿ ನೀರಿನ ಹರಿವು ಕಡಿಮೆಯಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರ ಭಾಷಣಕ್ಕೆ ಧನ್ಯವಾದ ಹೇಳುವ ಕುರಿತು ನಡೆಯುತ್ತಿದ್ದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಹದಾಯಿ ನೀರನ್ನು ಹಂಚಿಕೊಳ್ಳುವ ವಿವಾದದಲ್ಲಿ ಗೋವಾ ಮತ್ತು ಕರ್ನಾಟಕ ಎರಡು ರಾಜ್ಯಗಳನ್ನು ಕಟ್ಟಿಹಾಕಲಾಗಿದೆ. ಮಹದಾಯಿ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ಯೋಜನೆಯನ್ನು ಗೋವಾ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮಹದಾಯಿ ನೀರಿನ ಹರಿವು ತಿರುಗಿಸುವುದರಿಂದ ನಮ್ಮ ರಾಜ್ಯಕ್ಕೆ ಮಹದಾಯಿ ನೀರಿನ ಹರಿವು ಕಡಿಮೆಯಾಗಿದೆ. ಕರ್ನಾಟಕ ನೀರನ್ನು ಬೇರೆಡೆಗೆ ತಿರುಗಿಸಿರುವ ಕುರಿತು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಗಮನಕ್ಕೆ ತಂದಿದ್ದೇವೆ. ರಾಜ್ಯಕ್ಕೆ ಹರಿಯುವ ಮಹದಾಯಿ ನೀರು ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂಬುದನ್ನು ಸಹ ಕೇಂದ್ರಕ್ಕೆ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಾವಂತ್ ಹೇಳಿದರು.
ಗೋವಾದಲ್ಲಿರುವ ವನ್ಯಜೀವಿಗಳಿಗೆ ಸದಾಕಾಲ ನೀರಿನ ಹರಿವು ಮುಖ್ಯವಾಗುತ್ತದೆ ಎಂದ ಮುಖ್ಯಮಂತ್ರಿ ಸಾವಂತ್, ಮಹದಾಯಿ ವಿಚಾರವನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಮಹದಾಯಿ ನನಗೆ ತಾಯಿಗಿಂತ ಹೆಚ್ಚು. ಈ ವಿಷಯದಲ್ಲಿ ನಾವು ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. 2000 ದಿಂದಲೂ ನಡೆಯುತ್ತಿರುವ ಮಹದಾಯಿ ಆಂದೋಲನಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಮಹದಾಯಿ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸುವ ಅರ್ಜಿ ಕುರಿತು ಹೋರಾಟ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.