ಹೈದರಾಬಾದ್: ಇಲ್ಲಿನ ರಂಗಾರೆಡ್ಡಿ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಸ್ಮಾರ್ಟ್ ಡೇಟಾ ಸೆಂಟರ್ಗೆ ತೆಲಂಗಾಣ ಐಟಿ ಸಚಿವ ಕೆ.ಟಿ.ರಾಮ ರಾವ್ ಅಡಿಗಲ್ಲು ಹಾಕಿದರು.
ರಂಗರೆಡ್ಡಿ ಜಿಲ್ಲೆಯ ನರಸಿಂಗಿ ಗ್ರಾಮದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ತನ್ನದೇ ಆದ ಸ್ಮಾರ್ಟ್ ಡೇಟಾ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ.
ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಗದು ರಹಿತ ಸೇವೆಯ ಗುರಿಯಡಿ ನಾವು ಸಾಗಿದ್ದು, ಡಿಜಿಟಲ್ ಪಾವತಿಯತ್ತ ಗ್ರಾಹಕರನ್ನು ಉತ್ತೇಜಿಸುವ ಸಲುವಾಗಿ ಸ್ಮಾರ್ಟ್ ಡೇಟಾ ಸೆಂಟರ್ ಆರಂಭಿಸುತ್ತಿದ್ದೇವೆ. ಈ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮುಂದಾಗಿದ್ದೇವೆ ಎಂದು ಎನ್‌ಪಿಸಿಐನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದಿಲೀಪ್ ಅಸ್ಬೆ ಹೇಳಿದರು.
ನಾಲ್ಕನೇ ಹಂತದ ಮೊದಲ ದತ್ತಾಂಶ ಕೇಂದ್ರ ಇದಾಗಲಿದ್ದು, ಅಂತಾರಾಷ್ಟ್ರೀಯ ಡೇಟಾ ಸೆಂಟರ್ ಮಾನದಂಡಗಳ ಪ್ರಕಾರ ಇದನ್ನು ನಿರ್ಮಿಸಲಾಗುವುದು. ಇದು 8 ಲೇಯರ್ಗಳ ಭದ್ರತಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಕಟ್ಟಡವು 33 ಕಿಲೋವೋಲ್ಟ್ ಗ್ರಿಡ್‌ನಿಂದ ನೇರವಾಗಿ ವಿದ್ಯುತ್ ಪೂರೈಕೆ ಪಡೆಯಲಿದ್ದು, ಹೆಚ್ಚಿನ ದಕ್ಷತೆ ಹೊಂದಿರುತ್ತದೆ.