ನವದೆಹಲಿ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ಮಾಡಿ ರಾಜ್ಯಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ದೀರ್ಘವಾಗಿ ಚರ್ಚಿಸಿದ್ದಾರೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ನಿನ್ನೆ ಸಂಜೆ 5.30ಕ್ಕೆ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ದೀರ್ಘವಾಗಿ ಚರ್ಚಿಸಿದ್ದು, ಮಾನ್ಯ ಸಚಿವರು ನಮ್ಮ ಎಲ್ಲಾ ಬೇಡಿಕೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳು, ವಿಶೇಷಾಧಿಕಾರಿ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
1. ನಮ್ಮ ರಾಜ್ಯಕ್ಕೆ 2020-21ನೇ ಸಾಲಿಗೆ ಮನರೇಗಾ ಯೋಜನೆಯಡಿ ಒಟ್ಟು 13 ಕೋಟಿ ಮಾನವ ದಿನಗಳನ್ನು ಗುರಿಯಾಗಿ ನಿಗದಿಪಡಿಸಿದ್ದು, ಇಲ್ಲಿಯವರೆಗೂ ನಮ್ಮ ಇಲಾಖೆ ಸುಮಾರು 10.50 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಮಾನ್ಯ ಸಚಿವರು ಪ್ರಶಂಶಿಸಿದರು. ನಮಗೆ ನೀಡಿರುವ ಗುರಿ ಜನವರಿ 2021ಕ್ಕೆ ಸಾಧಿಸುವ ಭರವಸೆಯಿದ್ದು, ಹೆಚ್ಚುವರಿಯಾಗಿ 2 ಕೋಟಿ ಮಾನವ ದಿನಗಳನ್ನು ಅಂದರೆ ಸುಮಾರು ರೂ. 800 ಕೋಟಿಗಳ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.
2. ಕಳೆದ ನವೆಂಬರ್ 2019ರಲ್ಲಿ ಮಾನ್ಯ ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ 104 ನೆರೆ ಪೀಡಿತ ತಾಲೂಕುಗಳಿಗೆ ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ಮಂಜೂರು ಮಾಡಿದ್ದನ್ನು ಗಮನಕ್ಕೆ ತಂದಿದ್ದಾರೆ. ಈ ಸಾಲಿನಲ್ಲೂ ಅದೇ ಪರಿಸ್ಥಿತಿ ರಾಜ್ಯದಲ್ಲಿದ್ದು, 173 ತಾಲೂಕುಗಳ ಗ್ರಾಮೀಣ ಕುಟುಂಬಗಳಿಗೆ ಗರಿಷ್ಠ ಮಿತಿ 100 ಮಾನವ ದಿನಗಳನ್ನು 150 ಮಾನವ ದಿನಗಳಿಗೆ ಹೆಚ್ಚಿಸಲು ಮಾನ್ಯ ಸಚಿವರು ಒಪ್ಪಿದ್ದು, ಈ ಸಂಬಂಧ ಕೂಡಲೇ ಆದೇಶ ಹೊರಡಿಸಲಾಗುವುದೆಂದು ತಿಳಿಸಿದ್ದಾರೆ. ಇದರಿಂದ ಅಂದಾಜು ರೂ. 400 ಕೋಟಿಗಳ ಹೆಚ್ಚುವರಿಯಾಗಿ ರಾಜ್ಯಕ್ಕೆ ಲಭ್ಯವಾಗಲಿದೆ.
ಹೀಗೆ ನಮ್ಮ ಭೇಟಿಯ ಫಲಶೃತಿಯಾಗಿ ರೂ. 1200 ಕೋಟಿ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾಮೀಣ ಬಡ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗಾವಕಾಶ ಸಿಗಲಿದೆ.
3. ಮನರೇಗಾ ಯೋಜನೆಯಡಿ ಮಟೀರಿಯಲ್ ಬಿಲ್ಗಾಗಿ 1119 ಕೋಟಿ ರೂ.ಗಳನ್ನು ಶೀಘ್ರವಾಗಿ ಪಾವತಿಸುವಂತೆ ರಾಜ್ಯ ಸರ್ಕಾರವು ಕೋರಿದೆ. ರಾಜ್ಯದಿಂದ ಹಣ ಬಳಕೆ ಪ್ರಮಾಣಪತ್ರವನ್ನು ಒದಗಿಸಿದ ತಕ್ಷಣವೇ ಈ ಹಣವನ್ನು ಪಾವತಿಸಲಾಗುವು ಎಂದರು.
4. ಶ್ಯಾಮಪ್ರಸಾದ್ ಮುಖರ್ಜಿ ಆರ್-ಅರ್ಬನ್ ಮಿಷನ್ ಯೋಜನೆಯಡಿ ಹೆಚ್ಚುವರಿ 90 ಕ್ಲಸ್ಟರ್ ಮಂಜೂರು ಮಾಡುವಂತೆ ಕೋರಿ ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ರಾಜ್ಯದ ಈ ಕೋರಿಕೆಯನ್ನು ಅತಿ ಶೀಘ್ರವಾಗಿ ಪರಿಗಣಿಸಲಾಗುವುದೆಂದು ಸಚಿವರು ತಿಳಿಸಿದ್ದು, ಇದರಿಂದ ರೂ. 1000 ಕೋಟಿಗೂ ಹೆಚ್ಚಿನ ಆರ್ಥಿಕ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಲಿದೆ.