ಕೋಲ್ಕತಾ (ಪಶ್ಚಿಮ ಬಂಗಾಳ): ಅಂಫಾನ್ ಚಂಡಮಾರುತದ ಭೀಕರತೆಯ ಬಗ್ಗೆ ಇಲ್ಲಿನ ಪುಸ್ತಕ ಮಾರಾಟಗಾರರು ಬಿಚ್ಚಿಟ್ಟ ಅನುಭವದ ಬುತ್ತಿ ಇಲ್ಲಿದೆ.
ರಣಭಯಂಕರವಾಗಿ ಗಾಳಿ ಬೀಸಿದಂತೆ ಮರಗಳು ಬಿದ್ದವು. ವರುಣಾರ್ಭಟಕ್ಕೆ ಗೋದಾಮುಗಳು ಮತ್ತು ಅಂಗಡಿಗಳಲ್ಲಿದ್ದ ಪುಸ್ತಕಗಳೆಲ್ಲ ನನೆದವು. ಸಾವಿರಾರು ಪುಸ್ತಕಗಳನ್ನು ನೆನೆಸಿ ಕೊಲ್ಕತ್ತಾ ಪರಂಪರೆಯ ಅಮೂಲ್ಯವಾದ ಪ್ರಸಿದ್ಧ ಕಾಲೇಜ್ ಸ್ಟ್ರೀಟ್ನ್ನು ಅಂಫಾನ್ ಅಪಾಯಕ್ಕೆ ತಳ್ಳಿದೆ. ಮೇ 20 ರ ರಾತ್ರಿ, ಅಂಫಾನ್ ಚಂಡಮಾರುತದ ರುದ್ರನರ್ತನಕ್ಕೆ ಸುಮಾರು 1,500 ಮಳಿಗೆಗಳನ್ನು ಹೊಂದಿರುವ 1.5 ಕಿ.ಮೀ ರಸ್ತೆಯ ಕಾಲೇಜ್ ಸ್ಟ್ರೀಟ್‌ನ ಜನರ ಬದುಕನ್ನು ಮತ್ತಷ್ಟು ದುಸ್ಥಿತಿಗೆ ತಂದಿದೆ. ಮಾರ್ಚ್ 25 ರಂದು ಲಾಕ್‌ಡೌನ್‌ನೊಂದಿಗೆ ಮೌನವಾಗಿದ್ದ ಮಳಿಗೆಗಳು ಅನೇಕ ವ್ಯಾಪಾರಸ್ಥರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಹೇಗಾದರೂ ಬದುಕುಳಿಯುವ ಹೋರಾಟದಲ್ಲಿದ್ದ ಇವರಿಗೆ ಅಂಫಾನ್ ಮತ್ತಷ್ಟು ನಷ್ಟವನ್ನುಂಟು ಮಾಡಿದೆ.
ಸುಮಾರು ಎರಡು ವಾರಗಳ ನಂತರವೂ ಹಾನಿಯ ಲಕ್ಷಣಗಳು ಇನ್ನೂ ಇವೆ. ನೂರಾರು ಅಂಗಡಿ ಮಾಲೀಕರು ಯಥಾಸ್ಥಿತಿಗೆ ಬರಲು ಹೆಣಗಾಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರಲ್ಲಿ ಒಬ್ಬರಾದ ಎಸ್.ಕೆ ಹೈದರ್ ಅಲಿ ಹೇಳಿದ್ದಾರೆ.
ಕೋಲ್ಕತ್ತಾಗೆ ಹತ್ತಿರವಿರುವ ಹೂಗ್ಲಿ ಜಿಲ್ಲೆಯ ತನ್ನ ಹಳ್ಳಿಯಲ್ಲಿರುವ ಮನೆಯ ಕತ್ತಲ ಮೂಲೆಯಿಂದ ಚಂಡಮಾರುತದ ಭಯಾನಕತೆಯನ್ನು ಅವರು ವೀಕ್ಷಿಸಿದರು. ನಾಲ್ಕು ದಿನಗಳ ನಂತರ ಕಾಲೇಜ್ ಸ್ಟ್ರೀಟ್ನಲ್ಲಿರುವ ತಮ್ಮ ಅಂಗಡಿಗೆ ಬರುವಾಗ ರಸ್ತೆಯಲ್ಲಿ ಮೊಣಕಾಲು ಆಳದ ವರೆಗೆ ನೀರು ನಿಂತಿತ್ತು. ಈ ಮೂಲಕ ತನ್ನ ಅಂಗಡಿಯನ್ನು ಪ್ರವೇಶಿಸುವಾಗ ಶವಗಳಂತೆ ತೇಲುತ್ತಿರುವ ಪುಸ್ತಕಗಳನ್ನು ಕಂಡ ಅವರಿಗೆ ಎದೆ ಒಡೆದಂಥ ಅನುಭವವಾಗಿದೆ ಎಂದು ಹೇಳಿದ್ದಾರೆ.
ಮರಗಳು ಬೇರುಸಹಿತವಾಗಿ ಧರೆಗುರುಳಿವೆ. ಸುತ್ತಲಿನ ಎಲ್ಲ ವಸ್ತುಗಳು ಗಾಳಿಯಲ್ಲಿ ಹಾರುತ್ತಿವೆ. ಆದರೆ ಹಳ್ಳಿ ಪ್ರದೇಶಗಳಲ್ಲಿ ವಿನಾಶವು ಕೆಟ್ಟದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಂಪೂರ್ಣವಾಗಿ ಪ್ರವಾಹಕ್ಕೆ ಸಿಲುಕಿದ್ದ ನಾನು ಅಂಗಡಿಗೆ ಹೋಗುತ್ತಿದ್ದೆ. ನನ್ನ ಬಹುತೇಕ ಎಲ್ಲ ಪುಸ್ತಕಗಳು ಹಾನಿಗೀಡಾಗಿವೆ ಮತ್ತು ಮಾರಾಟವಾಗುವ ಸ್ಥಿತಿಯಲ್ಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಅವರ ತಂದೆ ನಡೆಸುತ್ತಿದ್ದ ಅಲಿಯ 45 ವರ್ಷದ ಅಂಗಡಿ ಈಗ ಸ್ಥಳೀಯ ಪುಸ್ತಕಗಳಾದ ಬೋಯಿ ಪ್ಯಾರಾ (ಪುಸ್ತಕಗಳ ನೆರೆಹೊರೆ) ಎಂದು ಕರೆಯಲ್ಪಡುವ ಅಪ್ರತಿಮ ಪುಸ್ತಕ ಮಾರುಕಟ್ಟೆಯಲ್ಲಿನ ಅನೇಕ ಅಂಗಡಿಗಳೊಂದಿಗೆ ಹಾಳಾಗಿದೆ.
ಅಂಫಾನ್ನಿಂದ ಉಂಟಾದ ಹಾನಿಯು ಕೋಟ್ಯಂತರ ರೂಪಾಯಿಗಳಿಗೆ ಹೋಗುವ ಸಾಧ್ಯತೆಯಿದೆ ಎಂದು ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರ ಸಂಘ ಅಂದಾಜಿಸಿದೆ.
ಕೋಲ್ಕತ್ತಾದ ಅವಿಭಾಜ್ಯ ಅಂಗ ಕಾಲೇಜ್ ಸ್ಟ್ರೀಟ್ :
ಕೋಲ್ಕತ್ತಾದ ಅವಿಭಾಜ್ಯ ಅಂಗವಾದ ಕಾಲೇಜ್ ಸ್ಟ್ರೀಟ್ 1817 ರಲ್ಲಿ ಡೇವಿಡ್ ಹೇರ್ ಸ್ಥಾಪಿಸಿದ ಹಿಂದೂ ಕಾಲೇಜು (ಈಗಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ) ದಿಂದ ಈ ಹೆಸರನ್ನು ಪಡೆದುಕೊಂಡಿದೆ ಎಂದು ನಂಬಲಾಗಿದೆ.
ಜಗತ್ತಿನಲ್ಲಿ ಈ ರೀತಿಯ ಪುಸ್ತಕ ಮಾರುಕಟ್ಟೆಯ ಏಕೈಕ ಪ್ರತಿರೂಪವೆಂದರೆ ಪ್ಯಾರಿಸ್‌ನ ಸೀನ್ ನದಿಯ ಪಕ್ಕದಲ್ಲಿರುವ ಸಣ್ಣ ಸ್ಟಾಲ್‌ಗಳ ಸಾಲುಗಳು. ಅದು ಕಾಲೇಜ್ ಸ್ಟ್ರೀಟ್ ಪುಸ್ತಕದಂಗಡಿಗಳಂತೆಯೇ ರಾತ್ರಿಯಲ್ಲಿ ಲಾಕ್ ಆಗುತ್ತದೆ ಮತ್ತು ಪ್ರತಿದಿನ ಬೆಳಿಗ್ಗೆ ಮತ್ತೆ ತೆರೆಯುತ್ತದೆ ಎಂದು ಬರಹಗಾರ ಅಮಿತ್ ಚೌಧರಿ ಹೇಳಿದರು.
ಕಲ್ಕತ್ತಾ: ಟು ಇಯರ್ಸ್ ಇನ್ ದಿ ಸಿಟಿ ಮತ್ತು ಮಧ್ಯಾಹ್ನ ರಾಗ್ ಮುಂತಾದ ಪುಸ್ತಕಗಳ ಲೇಖಕರು ಕಾಲೇಜ್ ಸ್ಟ್ರೀಟ್ ಪುಸ್ತಕ ಮಾರುಕಟ್ಟೆಯನ್ನು ಕೋಲ್ಕತ್ತದ ವಾಸಿಗಳಿಗೆ ಮಾತ್ರವಲ್ಲದೆ ದೇಶದ ಸಾಂಸ್ಕೃತಿಕ ಅನುವಂಶಿಕತೆ ಎಂದು ಬಣ್ಣಿಸಿದ್ದಾರೆ.
ಎಲ್ಲಾ ವಿಷಯಗಳು ಮತ್ತು ಪ್ರಕಾರಗಳಲ್ಲಿನ ಪುಸ್ತಕಗಳ ಸಂಗ್ರಹದೊಂದಿಗೆ ಇದು ಪುಸ್ತಕಗಳ ಅಕ್ಷಯಪಾತ್ರೆಯಂತಿದೆ. ಕಾಲೇಜ್ ಸ್ಟ್ರೀಟ್ ಬೌದ್ಧಿಕವಾಗಿ ಕುತೂಹಲದಿಂದ ಕೂಡಿರುವ ಸ್ಥಳವಾಗಿದೆ.