ಹೈದರಾಬಾದ್: ಆಗಸ್ಟ್ 12 2020, ಭಾರತ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ವಿಶೇಷವಾದ ದಿನವಾಗಿದೆ. ಏಕೆಂದರೆ ಇಂದು ಇಸ್ರೋ ಸಂಸ್ಥಾಪಕ ಡಾ. ವಿಕ್ರಮ್ ಎ ಸಾರಾಭಾಯಿ ಅವರ 101 ವರ್ಷದ ಜನ್ಮದಿನವಾಗಿದೆ.
ಭಾರತೀಯ ಭೌತಶಾಸ್ತ್ರಜ್ಞ ಡಾ. ವಿಕ್ರಮ್ ಸಾರಾಭಾಯಿ ಅವರನ್ನು "ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ" ಎಂದು ಕರೆಯಲಾಗುತ್ತದೆ. ಅವರು ಉತ್ತಮ ಸಂಸ್ಥೆ ನಿರ್ಮಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಸಂಸ್ಥೆಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಅಹಮದಾಬಾದ್‌ನಲ್ಲಿ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ (ಪಿಆರ್‌ಎಲ್) ಸ್ಥಾಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.
ಸಾರಾಭಾಯಿ ಕುಟುಂಬವು ಒಂದು ಪ್ರಮುಖ ಮತ್ತು ಶ್ರೀಮಂತ ಜೈನ ವ್ಯಾಪಾರ ಕುಟುಂಬವಾಗಿತ್ತು. ಅವರ ತಂದೆ ಅಂಬಲಾಲ್ ಸಾರಾಭಾಯಿ ಶ್ರೀಮಂತ ಕೈಗಾರಿಕೋದ್ಯಮಿ ಮತ್ತು ಗುಜರಾತ್‌ನಲ್ಲಿ ಅನೇಕ ಗಿರಣಿಗಳನ್ನು ಹೊಂದಿದ್ದರು. ಅಂಬಲಾಲ್ ಮತ್ತು ಸರಳ ದೇವಿ ಅವರ ಎಂಟು ಮಕ್ಕಳಲ್ಲಿ ವಿಕ್ರಮ್ ಸಾರಾಭಾಯಿ ಒಬ್ಬರು.
ಹಲವರಿಂದ ಪ್ರಭಾವಿತರಾಗಿದ್ದರು ಸಾರಾಭಾಯಿ:
ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಜೆ ಕೃಷ್ಣ ಮೂರ್ತಿ, ಮೋತಿಲಾಲ್ ನೆಹರು, ವಿ.ಎಸ್. ಶ್ರೀನಿವಾಸ ಶೆಟ್ಟಿ, ಜವಾಹರ್ ಲಾಲ್ ನೆಹರು, ಸರೋಜಿನಿ ನಾಯ್ಡು, ಮೌಲಾನಾ ಆಜಾದ್ ಅವರ ಮನೆಗೆ ವಿಕ್ರಮ್ ಸಾರಾಭಾಯಿ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅವರೊಂದಿಗಿನ ಸಂವಹನವು ವೈವಿಧ್ಯಮಯ ವಿಷಯಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು.
ಶಿಕ್ಷಣ:
ವಿಕ್ರಮ್ ಸಾರಾಭಾಯಿ ಅವರ ಒಡಹುಟ್ಟಿದವರೊಂದಿಗೆ ಹೋಮ್ಸ್ಕೂಲ್ ಮಾಡಲಾಯಿತು, ಅಲ್ಲಿ ಅವರ ಪೋಷಕರು ಪ್ರಯೋಗಾಲಯಗಳು ಮತ್ತು ಕಾರ್ಯಾಗಾರಗಳನ್ನು ಸ್ಥಾಪಿಸಿದರು. ಅವರು ಬಾಲ್ಯದಿಂದಲೂ ಗಣಿತ ಮತ್ತು ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮಧ್ಯಂತರ ವಿಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸಾರಾಭಾಯಿ ಅಹಮದಾಬಾದ್‌ನ ಗುಜರಾತ್ ಕಾಲೇಜಿನಿಂದ ಮೆಟ್ರಿಕ್ ಪಡೆದರು.
ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಇಂಗ್ಲೆಂಡ್‌ಗೆ ಹೋದರು. ಅಲ್ಲಿ ಅವರು ನೈಸರ್ಗಿಕ ವಿಜ್ಞಾನದಲ್ಲಿ ಟ್ರಿಪೋಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1947 ರಲ್ಲಿ, ಕೇಂಬ್ರಿಡ್ಜ್‌ನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಫೋಟೊಫಿಷನ್ (ಉಷ್ಣವಲಯದ ಅಕ್ಷಾಂಶಗಳಲ್ಲಿ ಕಾಸ್ಮಿಕ್ ರೇ ತನಿಖೆ) ಕೆಲಸಕ್ಕಾಗಿ ಪಿಹೆಚ್‌ಡಿ ಪಡೆದರು.
ಸಂಶೋಧನೆ:
ಅವರಿಗೆ ಕಾಸ್ಮಿಕ್ ಕಿರಣಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅವರು ಪೂನಾ ಸೆಂಟ್ರಲ್ ಮೆಟ್ರೊಲಾಜಿಕಲ್ ಸ್ಟೇಷನ್‌ನಲ್ಲಿ ಸ್ವಲ್ಪ ಸಮಯದವರೆಗೆ ಕಾಸ್ಮಿಕ್ ಕಿರಣಗಳ ಬಗ್ಗೆ ಸಂಶೋಧನೆ ನಡೆಸಿದರು. ನಂತರ ತಮ್ಮ ಸಂಶೋಧನೆಯನ್ನು ಮುಂದುವರಿಸಲು ಕಾಶ್ಮೀರಕ್ಕೆ ಹೋದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಭೌತಶಾಸ್ತ್ರಜ್ಞ ಸರ್ ಸಿ.ವಿ.ರಾಮನ್ ಅವರ ಅಡಿಯಲ್ಲಿ ಕಾಸ್ಮಿಕ್ ಕಿರಣಗಳ ಬಗ್ಗೆ ಸಂಶೋಧನೆ ನಡೆಸಿದರು.
ಅವರು ಕೇಂಬ್ರಿಡ್ಜ್‌ನಿಂದ ಹಿಂದಿರುಗಿದ ಸ್ವಲ್ಪ ಸಮಯದ ನಂತರ, ಅಹಮದಾಬಾದ್‌ನಲ್ಲಿ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಿದರು. ಈ ಸಂಸ್ಥೆ ಕಾಸ್ಮಿಕ್ ಕಿರಣಗಳು ಮತ್ತು ಬಾಹ್ಯಾಕಾಶ ಅಧ್ಯಯನಕ್ಕೆ ಮೀಸಲಾಗಿದೆ.
1955 ರಲ್ಲಿ, ಸಾರಾಭಾಯ್ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ ಶಾಖೆಯನ್ನು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಸ್ಥಾಪಿಸಿದರು. ಭಾರತ ಸರ್ಕಾರದ ಪರಮಾಣು ಇಂಧನ ಇಲಾಖೆ ಅದೇ ಸ್ಥಳದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತು.
ಭಾರತೀಯ ಬಾಹ್ಯಾಕಾಶ ಯೋಜನೆ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆಯು ಸಾರಾಭಾಯಿ ಅವರ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ರಷ್ಯಾದ ಸ್ಪುಟ್ನಿಕ್ ಉಡಾವಣೆಯ ನಂತರ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಅವರು ಯಶಸ್ವಿಯಾಗಿ ಸರ್ಕಾರಕ್ಕೆ ಮನವರಿಕೆ ಮಾಡಿದರು.
ಡಾ. ಸಾರಾಭಾಯಿ ತಮ್ಮ ಉಲ್ಲೇಖದಲ್ಲಿ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ ಕೆಲವರು ಇದ್ದಾರೆ. ನಮಗೆ, ಉದ್ದೇಶದ ಯಾವುದೇ ಅಸ್ಪಷ್ಟತೆಯಿಲ್ಲ. ಚಂದ್ರನ ಅಥವಾ ಗ್ರಹಗಳ ಪರಿಶೋಧನೆಯಲ್ಲಿ ಮುಂದುವರಿದ ರಾಷ್ಟ್ರಗಳು ಅಥವಾ ಮಾನವಸಹಿತ ಬಾಹ್ಯಾಕಾಶ ಹಾರಾಟ ವಿಚಾರದಲ್ಲಿ ಆರ್ಥಿಕವಾಗಿ ಸ್ಪರ್ಧಿಸುವ ಕಲ್ಪನೆ ನಮ್ಮಲ್ಲಿಲ್ಲ. ಆದರೆ ನಾವು ರಾಷ್ಟ್ರೀಯವಾಗಿ ಮತ್ತು ರಾಷ್ಟ್ರಗಳ ಸಮುದಾಯದಲ್ಲಿ ಅರ್ಥಪೂರ್ಣ ಪಾತ್ರವನ್ನು ವಹಿಸಬೇಕಾದರೆ, ಮನುಷ್ಯ ಮತ್ತು ಸಮಾಜದ ನೈಜ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಅನ್ವಯಿಸುವಲ್ಲಿ ಮಾತ್ರ ಎರಡನೆಯವರಾಗಿರಬಾರದು ಎಂದು ನಮಗೆ ಮನವರಿಕೆಯಾಗಿದೆ ಎಂದಿದ್ದರು.
ಭಾರತದ ಪರಮಾಣು ವಿಜ್ಞಾನ ಕಾರ್ಯಕ್ರಮದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಡಾ.ಹೋಮಿ ಜಹಾಂಗೀರ್ ಬಾಬಾ ಅವರು ಭಾರತದಲ್ಲಿ ಮೊದಲ ರಾಕೆಟ್ ಉಡಾವಣಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಡಾ.ಸಾರಾಭಾಯಿ ಅವರನ್ನು ಬೆಂಬಲಿಸಿದರು. ಈ ಕೇಂದ್ರವನ್ನು ಅರೇಬಿಯನ್ ಸಮುದ್ರದ ಕರಾವಳಿಯ ತಿರುವನಂತಪುರಂ ಬಳಿಯ ತುಂಬಾದಲ್ಲಿ ಸ್ಥಾಪಿಸಲಾಯಿತು. ಮುಖ್ಯವಾಗಿ ಇದು ಸಮಭಾಜಕ ವೃತ್ತಕ್ಕೆ ಹತ್ತಿರದಲ್ಲಿದೆ.
ಮೂಲಸೌಕರ್ಯ, ಸಿಬ್ಬಂದಿ, ಸಂವಹನ ಸಂಪರ್ಕ ಮತ್ತು ಲಾಂಚ್ ಪ್ಯಾಡ್‌ಗಳನ್ನು ಸ್ಥಾಪಿಸುವಲ್ಲಿ ಗಮನಾರ್ಹ ಪ್ರಯತ್ನದ ನಂತರ, ಉದ್ಘಾಟನಾ ಹಾರಾಟವನ್ನು ನವೆಂಬರ್ 21, 1963 ರಂದು ಪ್ರಾರಂಭಿಸಲಾಯಿತು.
1966 ರಲ್ಲಿ ನಾಸಾ ಜೊತೆ ಡಾ.ಸಾರಾಭಾಯ್ ಅವರ ಸಂವಾದದ ಪರಿಣಾಮವಾಗಿ, ಸ್ಯಾಟಲೈಟ್ ಇನ್ಸ್ಟ್ರಕ್ಷನಲ್ ಟೆಲಿವಿಷನ್ ಎಕ್ಸ್‌ಪೆರಿಮೆಂಟ್ (SITE) ಅನ್ನು ಜುಲೈ 1975 - ಜುಲೈ 1976 ರಲ್ಲಿ ಪ್ರಾರಂಭಿಸಲಾಯಿತು.(ಈ ವೇಳೆಗಾಗಲೇ ಅವರು ನಿಧನರಾಗಿದ್ದರು)
ಡಾ. ಸಾರಾಭಾಯಿ ಅವರು ಭಾರತೀಯ ಉಪಗ್ರಹವನ್ನು ತಯಾರಿಸಲು ಮತ್ತು ಉಡಾವಣೆ ಮಾಡಲು ಯೋಜನೆಯನ್ನು ಪ್ರಾರಂಭಿಸಿದರು. ಇದರ ಪರಿಣಾಮವಾಗಿ, ಮೊದಲ ಭಾರತೀಯ ಉಪಗ್ರಹವಾದ ಆರ್ಯಭಟವನ್ನು 1975 ರಲ್ಲಿ ರಷ್ಯಾದ ಕಾಸ್ಮೋಡ್ರೋಮ್‌ನಿಂದ ಕಕ್ಷೆಗೆ ಸೇರಿಸಲಾಯ್ತು.